ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿಚಾರಣೆ ಸಮಯದಲ್ಲಿ ಮಾಡಿದ ಹೋರಾಟ, ರೈತ ವಿರೋಧಿ ಕಾನೂನು ವಿರುದ್ಧದ ಹೋರಾಟ, ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ, ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಜತೆಗೆ ಆದಾಯ ತೆರಿಗೆ ಇಲಾಖೆ ಪ್ರಕರಣದ ವಿಚಾರಣೆ ಇಂದು ನಡೆದಿದೆ. ಈ ಎಲ್ಲಾ ಪ್ರಕರಣಗಳ ವಿಚಾರಣೆ ಒಂದೇ ದಿನ ಇದ್ದ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಯಾತ್ರೆಗೆ ವಿರಾಮ ನೀಡಿ ನಾನೇ ಹಾಜರಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರ ಸಿವಿಲ್ ಕೋರ್ಟ್ ಬಳಿ ಡಿ.ಕೆ. ಶಿವಕುಮಾರ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಪ್ರಕರಣದಲ್ಲಿ ಜಾಮೀನು ವಿಸ್ತರಣೆ ಮಾಡಿಕೊಳ್ಳಬೇಕಿತ್ತು. ಜಾಮೀನು ವಿಸ್ತರಣೆ ಆಗಿದೆ. ಉಳಿದ ಪ್ರಕರಣಗಳಲ್ಲಿ ನಾವು ಸಮಯಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ವಿಚಾರಣೆ ಮೇ ತಿಂಗಳಿಗೆ ಮುಂದೂಡಿಕೆಯಾಗಿದೆ. ಆದಾಯ ತೆರಿಗೆ ಇಲಾಖೆ ಪ್ರಕರಣ ಕೂಡ ಮೇ ತಿಂಗಳಿಗೆ ಮುಂದೂಡಿಕೆಯಾಗಿದೆ ಎಂದು ತಿಳಿಸಿದರು.