ಶಾಲೆಯ ಉಳಿವಿಗಾಗಿ ನಾನು ಅನೇಕ ಹೋರಾಟ ಮಾಡಿದ್ದೇನೆ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

Prasthutha|

►ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ: ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್ ಹೇಳಿಕೆ

- Advertisement -

ಬಂಟ್ವಾಳ: ಐಎಂಸಿ (ಇತ್ತಿಫಾಕ್ ಮೀಲಾದ್ ಕಮಿಟಿ) ಜೋಗಿಬೆಟ್ಟು ಗಡಿಯಾ‌ರ್ ಇದರ ವತಿಯಿಂದ ಶಿಕ್ಷಣದ ಮಹತ್ವ ಮತ್ತು ಆದರ್ಶ ವ್ಯಕ್ತಿತ್ವ ಉಪನ್ಯಾಸ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮವು ಶನಿವಾರ ದ.ಕ.ಜಿ.ಪ.ಹಿ.ಪ್ರಾ ಶಾಲೆ ಗಡಿಯಾರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ ಇವರನ್ನು ಸನ್ಮಾನಿಸಲಾಯಿತು.

ಜೊತೆಗೆ ಹಿರಿಯ ಶಿಕ್ಷಕಿಯರಾದ ಸುಚೇತಾ ಇವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮಾತನಾಡಿದ ಪದ್ಮಶ್ರೀ ಹರೇಕಳ ಹಾಜಬ್ಬ, ನಾನು ಬಡತನದಲ್ಲಿ ಹುಟ್ಟಿ ಬೆಳೆದವ. ನಾನು ಕಿತ್ತಳೆ ಮಾರಿ ಜೀವನ ನಡೆಸಿದವ. ಬದುಕಿನಲ್ಲಿ ಅನೇಕ ಕಷ್ಟ, ಸವಾಲುಗಳನ್ನು ಎದುರಿಸಿದ್ದೇನೆ. ಪತ್ರಿಕಾ ಮಾಧ್ಯಮವು ನನ್ನನ್ನು ಜನರಿಗೆ ಪರಿಚಯಿಸಿದ್ದರಿಂದ ನಾನು ಇಂದು ದೇಶದ ರಾಷ್ಟ್ರಪತಿಯಿಂದ‌ ಪದ್ಮಶ್ರೀ ಪ್ರಶಸ್ತಿ ಪಡೆಯಲು ಕಾರಣವಾಯಿತು. ನನಗೆ ಯಾವುದೇ ವಿದ್ಯಾಭ್ಯಾಸ ಇಲ್ಲ. ನನ್ನ ಶಾಲೆಯ ಉಳಿವಿಗಾಗಿ ನಾನು ಅನೇಕ ಹೋರಾಟಗಳನ್ನು ಮಾಡಿದ್ದೇನೆ. ನೀವು ಉತ್ತಮವಾಗಿ ಕಲಿತು ಉತ್ತಮ ಪ್ರಜೆಗಳಾಗಿ ಎಂದು ಕರೆ ನೀಡಿದರು.

- Advertisement -

ಇನ್ನು ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್, ನಾನು ಕೂಲಿ‌ ಕೆಲಸ ಮಾಡಿ ಜೀವನ ನಡೆಸಿದವನು.‌ ನನಗೆ ವಿದ್ಯಾಭ್ಯಾಸ ಇಲ್ಲ.‌ ಹೀಗಾಗಿ ನನ್ನ‌ಮಕ್ಕಳಿಗೆ ವಿದ್ಯಾಭ್ಯಾಸ ‌ಕೊಡಿಸಿದೆ. ನಮ್ಮ ಕಡೆ ನೀರಿನ ಸಮಸ್ಯೆ ಇತ್ತು. ಹೀಗಾಗಿ ಜಲಕ್ರಾಂತಿ ಮಾಡಲು ಪ್ರಯತ್ನಿಸಿದೆ. ನಾನು ಪ್ರಶಸ್ತಿಗಾಗಿ ಈ‌ ಕಾರ್ಯ ಮಾಡಿದ್ದಲ್ಲ. ನನಗೆ ಅದರ ನಿರೀಕ್ಷೆಯೇ ಇರಲಿಲ್ಲ ಅಂದರು.

ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಸಿ ಜೋಗಿಬೆಟ್ಟು ಅಧ್ಯಕ್ಷ ಅಬ್ದುಲ್ ರಶೀದ್ ವಹಿಸಿದ್ದರು. ಕಾರ್ಯಕ್ರಮವನ್ನು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಗಡಿಯಾರ ಮುಖ್ಯೋಪಾಧ್ಯಯ ಪುಟ್ಟರಂಗನಾಥ.ಟಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗಡಿಯಾರ ಎಸ್ ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಎಂಜಿಎಂ ಗಡಿಯಾರ ಅಧ್ಯಕ್ಷ ರಿಯಾಝ್ ಕಲ್ಲಾಜೆ, ಝೀ ಕನ್ನಡ ನ್ಯೂಸ್ ನ ಪತ್ರಕರ್ತ, ನಿರೂಪಕ ಶಂಶೀರ್ ಬುಡೋಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಲ್ತಾಫ್ ವಿದ್ಯಾನಗರ, ಖಜಾಂಜಿ ಷರೀಫ್ ಪಟೀಲ, ಜತೆ ಕಾರ್ಯದರ್ಶಿ ಆಶಿಕ್ ಜೋಗಿಬೆಟ್ಟು, ಝುಬೈರ್ ವಿದ್ಯಾನಗರ, ಯೂನುಸ್ ಪಟ್ಲ ಸೇರಿದಂತೆ ಐಎಂಸಿ ಜೋಗಿಬೆಟ್ಟು ಪದಾಧಿಕಾರಿಗಳು, ಗಡಿಯಾರ ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಪಿಜೆ  ಅಬ್ದುಲ್ ಅಝೀಝ್ ಗಡಿಯಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Join Whatsapp