ಸಂತೋಷ್ ಪಾಟೀಲ್ ಯಾರು ಎಂದು ನನಗೆ ಗೊತ್ತಿಲ್ಲ, ಷಡ್ಯಂತ್ರದ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ: ಈಶ್ವರಪ್ಪ

Prasthutha|

ಬೆಂಗಳೂರು: ಸಂತೋಷ್ ಪಾಟೀಲ್ ಯಾರು ಎಂದು ನನಗೆ ಗೊತ್ತಿಲ್ಲ, ಷಡ್ಯಂತ್ರದ ಬಗ್ಗೆ ಈಗಾಗಲೇ ಮಾರ್ಚ್ 10 ರಂದು ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ  ಹೇಳಿದ್ದಾರೆ.

- Advertisement -

ಸಂತೋಷ್ ಪಾಟೀಲ್ ಎಂಬ ವ್ಯಕ್ತಿ ದೆಹಲಿಗೆ ಹೋಗಿ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ನಮ್ಮ ಕಡೆಯವರು ಯಾರೋ ಕಮಿಷನ್ ಕೇಳಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅದಕ್ಕೆ ಗಿರಿರಾಜ್ ಸಿಂಗ್ ಕಿಶೋರ್ ಅವರ ಕಚೇರಿಯಿಂದ ನಮ್ಮ ಇಲಾಖೆ ಎಸಿಎಸ್ ಅತೀಕ್ ಅವರಿಂದ ವಿವರ ಕೇಳಿದ್ದರು. ಅವರು ಪಂಚಾಯತ್ ರಾಜ್ ಇಲಾಖೆಯಿಂದ ಸಂತೋಷ್ ಅವರಿಗೆ ಯಾವುದೇ ವರ್ಕ್ ಆರ್ಡರ್ ಮಂಜೂರು ಮಾಡಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸ್ಪಷ್ಟೀಕರಣ ಕಳುಹಿಸಿದ್ದಾರೆ ಎಂದು ಹೇಳಿದರು.

ಸಂತೋಷ್ ಪಾಟೀಲ್ ಯಾರು ಅಂತಾ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಕೇಳಿದೆ, ಅವರಿಗೂ ಗೊತ್ತಿಲ್ಲ. ನಮ್ಮ ಪಕ್ಷದ ನಾಯಕರಿಗೆ, ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ ಅಂತಾ ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಸಂಸದರು ಸುದ್ದಿಗೋಷ್ಠಿ ಮಾಡಿ ಹೇಳಿದ್ದಾರೆ. ನಮ್ಮ ಇಲಾಖೆಯಿಂದ ಯಾವುದೇ ವರ್ಕ್ ಆರ್ಡರ್ ಅವರಿಗೆ ಕೊಟ್ಟಿಲ್ಲ. ಕೆಲಸವೇ ಮಾಡಿಸಿಲ್ಲ ಎಂದ ಮೇಲೆ ಹಣ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.



Join Whatsapp