ಮುಂಬೈ: ನಾನು ದನದ ಮಾಂಸ ಸೇರಿದಂತೆ ಯಾವುದೇ ಮಾಂಸ ತಿನ್ನುವುದಿಲ್ಲ. ನಾನೊಬ್ಬಳು ಹೆಮ್ಮೆಯ ಹಿಂದು ಎಂದು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರನೌತ್ ಹೇಳಿದ್ದಾರೆ.
‘ನಾನು ದನದ ಮಾಂಸವನ್ನಾಗಲಿ ಅಥವಾ ಇನ್ಯಾವುದೇ ರೀತಿಯ ಮಾಂಸವನ್ನು ತಿನ್ನುವುದಿಲ್ಲ. ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರರಹಿತ ವದಂತಿಗಳನ್ನು ಹಬ್ಬಿಸುತ್ತಿರುವುದು ನಾಚಿಕೆಗೇಡಿನ ವಿಷಯ. ನಾನು ದಶಕಗಳಿಂದ ಯೋಗ ಮತ್ತು ವೇದ ಆಧರಿತ ಜೀವನ ಶೈಲಿಯನ್ನು ಅನುಸರಿಸುತ್ತಿದ್ದೇನೆ ಹಾಗೂ ಉತ್ತೇಜಿಸುತ್ತಿದ್ದೇನೆ. ವದಂತಿ ಹಬ್ಬಿಸುವ ತಂತ್ರಗಳಿಂದ ನನ್ನ ಹೆಸರಿಗೆ ಕಳಂಕ ಹಚ್ಚಲು ಸಾಧ್ಯವಿಲ್ಲ. ನಾನು ಏನೆಂಬುದು ನನ್ನ ಜನರಿಗೆ ಗೊತ್ತಿದೆ. ನಾನೊಬ್ಬಳು ಹೆಮ್ಮೆಯ ಹಿಂದು ಎಂಬುದು ಅವರಿಗೆ ಗೊತ್ತಿದೆ. ಅವರನ್ನು ಯಾರೂ ಹಾದಿ ತಪ್ಪಿಸಲು ಸಾಧ್ಯವಿಲ್ಲ’ ಎಂದು ಕಂಗನಾ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕಂಗನಾ ದನದ ಮಾಂಸ ತಿನ್ನುತ್ತಾರೆ ಎಂದು ಕೆಲವರು ಪೋಸ್ಟ್ ಮಾಡಿದ ಬೆನ್ನಲ್ಲೇ ಕಂಗನಾ ಈ ಸ್ಪಷ್ಟನೆ ನೀಡಿದ್ದಾರೆ.