ಮುಂಬೈ: ಮುಸ್ಲಿಮ್ ಮಹಿಳೆಯರ ಭಾವಚಿತ್ರಗಳನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಿರುವ ಬುಲ್ಲಿ ಬಾಯಿ ಅಪ್ಲಿಕೇಶನ್ ನ ಮಾಸ್ಟರ್ ಮೈಂಡ್ ನಾನು. ಈಗ ಬಂಧಿಸಿರುವ ಅಮಾಯಕರನ್ನು ಬಿಟ್ಟುಬಿಡಿ ಎಂದು ಟ್ವಿಟ್ಟರ್ ಖಾತೆಯೊಂದರಿಂದ ಅನಾಮಧೇಯ ವ್ಯಕ್ತಿಯೊಬ್ಬ ಬುಧವಾರ ಟ್ವೀಟ್ ಮಾಡಿದ್ದಾನೆ.
‘ ಮುಂಬೈ ಪೊಲೀಸರೇ ನೀವು ಅಮಾಯಕರನ್ನು ಬಂಧಿಸಿದ್ದೀರಿ. ಬುಲ್ಲಿ ಬಾಯಿಯ ಸೃಷ್ಟಿಕರ್ತ ನಾನು. ನೀವು ಬಂಧಿಸಿರುವವರಿಗೂ, ಬುಲ್ಲಿ ಬಾಯಿಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಆದಷ್ಟು ಬೇಗ ಬಿಡುಗಡೆ ಮಾಡಿ’ ಎಂದು ಟ್ವಿಟರ್ ನಲ್ಲಿ ವ್ಯಕ್ತಿ ಆಗ್ರಹಿಸಿದ್ದಾನೆ.
ಬುಲ್ಲಿ ಬಾಯಿ ಪ್ರಾರಂಭವಾದಾಗ ಮುಂದೆ ಅದು ಏನಾಗಬಹುದು ಎಂಬುದರ ಬಗ್ಗೆ ನನಗೆ ತಿಳಿದಿರಲಿಲ್ಲ. ಹೀಗಾಗಿ ನಾನು ನನ್ನ ಸ್ನೇಹಿತರಾದ ವಿಶಾಲ್ ಮತ್ತು ಸ್ವಾತಿಯ ಖಾತೆಗಳನ್ನು ಬಳಸಿಕೊಂಡೆ. ನಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ಅವರಿಗೆ ಇರಲಿಲ್ಲ. ಈಗ ಅವರು ಬಂಧಿಯಾಗಿದ್ದಾರೆ. ಈ ಟ್ವೀಟ್ನ ಕಮೆಂಟ್ನಲ್ಲಿ ನನ್ನನ್ನು ನಿಂದಿಸಲು ಮುಕ್ತ ಅವಕಾಶವಿದೆ,’ ಎಂದು ಮತ್ತೊಂದು ಪೋಸ್ಟ್ ಹಾಕಲಾಗಿದೆ.
‘ಯಾರಾದರೂ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದರೆ ನಾನು ವೈಯಕ್ತಿಕವಾಗಿ ಬಂದು ಶರಣಾಗುತ್ತೇನೆ’ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಈ ಟ್ವೀಟ್ ಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸ್ ಅಧಿಕಾರಿಗಳು, @giyu44 ಟ್ವಿಟರ್ ಖಾತೆಯ ಜಾಡನ್ನು ಹಿಂಬಾಲಿಸಿ ಹೊರಟಿದ್ದಾರೆ.