ನ್ಯಾಯಾಲಯದ ಹಿಜಾಬ್ ತೀರ್ಪು ಸರಿ ಇಲ್ಲ ಎಂದು ಹೇಳಲು ನಾನು ತಯಾರಿಲ್ಲ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೋರ್ಟ್ ತೀರ್ಪು ಕೊಟ್ಟಿದೆ. ಕೆಲವರು ಅದನ್ನು ಒಪ್ಪುತ್ತಾರೆ, ಕೆಲವರು ಒಪ್ಪಲ್ಲ. ತೀರ್ಪಿನ ಕುರಿತು ಸುಪ್ರೀಂ ಕೋರ್ಟಿಗೂ ಹೋಗಬಹುದು.ಈ ತೀರ್ಪು ಇಂದಲ್ಲ ನಾಳೆ ಸೆಟಲ್ ಆಗಬಹುದು. ಆದರೆ ನ್ಯಾಯಾಲಯದ ತೀರ್ಪು ಸರಿ ಇಲ್ಲ ಅಂತ ಹೇಳಲು ನಾನು ತಯಾರಿಲ್ಲ ಎಂದು ಹೇಳಿದ್ದಾರೆ.

- Advertisement -

ಹಿಜಾಬ್ ಧರಿಸಿದರೆ ಎಸ್ಸೆಸೆಲ್ಸಿ ಪರೀಕ್ಷೆಗೆ ಅವಕಾಶವಿಲ್ಲ ಎಂಬ ಸರಕಾರದ ಆದೇಶದ ಕುರಿತು ಮಾತನಾಡಿದ ಡಿಕೆಶಿ, ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ತಂದೆ-ತಾಯಿ ಅಥವಾ ಸರಕಾರ ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದರು. ಮಕ್ಕಳು ತಪ್ಪು ಮಾಡಬಹುದು, ಅವರಿಗೆ ಹಠ ಇರಬಹುದು ಆದರೆ ಅವರ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಲು ಅವರೊಂದಿಗೆ ಕುಳಿತು ಮಾತನಾಡಬೇಕು ಎಂದರು.

ಧರ್ಮಗುರುಗಳು, ತಂದೆ-ತಾಯಂದಿರು ಸೇರಿದಂತೆ ಶಿಕ್ಷಕರನ್ನು ಬಳಸಿಕೊಂಡು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು. ಮಕ್ಕಳು ಶಿಕ್ಷಕರ ಮಾತನ್ನು ಗೌರವ ಕೊಟ್ಟು ಕೇಳುತ್ತಾರೆ. ತಾಯಿ ಮೊದಲ ಗುರು. ಶಿಕ್ಷಕರು ಎರಡನೇ ಗುರು. ಯಾರ್ಯಾರು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಬೇಕೋ ಅದನ್ನು ಮಾಡಬೇಕು ಎಂದರು.

- Advertisement -

ಸಿದ್ದರಾಮಯ್ಯರ ದುಪ್ಪಟ್ಟ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಏನೆಲ್ಲಾ ಹೇಳುತ್ತದೋ, ಏನೆಲ್ಲಾ ಅವಕಾಶ ನೀಡಿದೆಯೋ ಅದರ ಪರವಾಗಿ ಕಾಂಗ್ರೆಸ್ ಇರುತ್ತದೆ. ನಮಗೆ ಅದುವೇ ಬೈಬಲ್, ಅದೇ ಖುರಾನ್, ಅದೇ ಭಗವದ್ಗೀತೆ, ಇದಕ್ಕಿಂತ ಹೆಚ್ಚು ಏನನ್ನು ಹೇಳಲಾರೆ ಎಂದು ಮಾರ್ಮಿಕವಾಗಿ ನುಡಿದರು.



Join Whatsapp