ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಸಾಮರ್ಥ್ಯ ನನಗಿಲ್ಲ: ಸಚಿವ ಬಿ. ಶ್ರೀರಾಮುಲು

Prasthutha|

ಬಳ್ಳಾರಿ: ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಇನ್ನೂ ತೀರ್ಮಾನವಾಗಿಲ್ಲ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಸಾಮರ್ಥ್ಯ ನನಗಿಲ್ಲ. ಅವರ ವಿರುದ್ಧ ಸ್ಪರ್ಧಿಸುವಷ್ಟು ದೊಡ್ಡವ ನಾನಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

- Advertisement -

ಸಂಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ನಾಲ್ಕು ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ, ಪಕ್ಷಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ವರದಿ ನೀಡುತ್ತೇನೆ. ವರದಿ ಆಧರಿಸಿ ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುವೆ. ಸಿದ್ದರಾಮಯ್ಯ ಮಾಸ್ ಲೀಡರ್. ನಾನು ಅವರಷ್ಟು ದೊಡ್ಡ ಲೀಡರ್ ಅಲ್ಲ. ನನ್ನ ಸಾಮರ್ಥ್ಯದ ಮಟ್ಟಕ್ಕೆ ನಾನು ಯೋಚಿಸುತ್ತೇನೆ. ನನ್ನ ಇತಿಮಿತಿಯಲ್ಲಿ ಎಲ್ಲಿ ಸ್ಪರ್ಧಿಸಬೇಕೋ ಅಲ್ಲಿಯೇ ಸ್ಪರ್ಧಿಸುವೆ ಎಂದರು.

ಮೊಳಕಾಲ್ಮೂರು ಕ್ಷೇತ್ರದ ಜನ ಐದು ವರ್ಷಕ್ಕೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಸದ್ಯ ನಾನು ಅಲ್ಲಿಯ ಶಾಸಕ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಜನ ಸಹ ಒತ್ತಾಯ ಮಾಡುತ್ತಿದ್ದಾರೆ. ಸಂಡೂರು ಕ್ಷೇತ್ರದಿಂದ ನಿಲ್ಲಬೇಕೆಂಬ ಒತ್ತಾಯವೂ ಇದ್ದು, ಪಕ್ಷ ಎಲ್ಲಿ ಸೂಚಿಸುತ್ತದೋ ನೋಡೋಣ. ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಗೆಲ್ಲುವ ಗುರಿಯೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.

Join Whatsapp