ನವದೆಹಲಿ: ನಾನು ಪೂರ್ಣಾವಧಿ ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ಅಧ್ಯಕ್ಷೆ ಎಂದು ಸೋನಿಯಾ ಗಾಂಧಿ ಇಂದು ಒತ್ತಿ ಹೇಳುವ ಮೂಲಕ ಪಕ್ಷದೊಳಗಿನ ಟೀಕಾಕಾರರು ಮತ್ತು ಬಂಡಾಯಗಾರರಿಗೆ ತಿರುಗೇಟು ನೀಡಿದ್ದಾರೆ.
“ನಾನು ಯಾವಾಗಲೂ ಮುಕ್ತತೆಯನ್ನು ಮೆಚ್ಚಿದ್ದೇನೆ” ಮತ್ತು “ಮಾಧ್ಯಮದ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ” ಎಂದು ಸೋನಿಯಾ ಗಾಂಧಿ ಬಂಡಾಯ ನಾಯಕರ ಬಗ್ಗೆ ಪ್ರತಿಕ್ರಿಯಿಸಿದರು.
ಎರಡು ವರ್ಷಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ ಮಧ್ಯಂತರ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಅವರು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಲ್ಲಿ ಮಾತನಾಡುತ್ತಿದ್ದರು.
ಪ್ರಸಕ್ತ ಇಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ನಾಯಕರ ನಡುವೆ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಾದ ರೈತರ ಪ್ರತಿಭಟನೆ, ಸಾಂಕ್ರಾಮಿಕ ಸಂದರ್ಭದಲ್ಲಿ ನೆರವು ಮತ್ತು ಪರಿಹಾರದಂತಹ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಸೋನಿಯ ಗಾಂಧಿ ಅವರು ಪಕ್ಷದ ನಾಯಕರಿಗೆ ವಿವರಿಸಿದರು. ಮಾತ್ರವಲ್ಲ ದೌರ್ಜನ್ಯಕ್ಕೊಳಗಾದ ಗುಂಪು ಮತ್ತು ಸಮುದಾಯಗಳ ಪರವಾಗಿ ಧ್ವನಿಯೆತ್ತುವಂತೆ ಕರೆ ನೀಡಿದರು.
ಮಾಧ್ಯಮದ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ ಎಂದು ಸೋನಿಯಾ ಗಾಂಧಿ ಸಿ.ಡಬ್ಲ್ಯೂ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಕ್ಷ ಎದುರಿಸುತ್ತಿರುವ ಸವಾಲುಗಳನ್ನು ಕುರಿತು ಮುಕ್ತ ಮತ್ತು ಪ್ರಾಮಾಣಿಕ ಚರ್ಚೆ ನಡೆಸುವಂತೆ ಪಕ್ಷದ ಸಹೋದ್ಯೋಗಿಗಳಿಗೆ ಕರೆ ನೀಡಿದರು.
ಮಾತ್ರವಲ್ಲ ಈ ಸಭೆಯು ಪಕ್ಷದ ಆಂತರಿಕ ವಿಷಯವಾಗಿದ್ದು, ಪ್ರಸಕ್ತ ವಿದ್ಯಮಾನಗಳ ಕುರಿತು ಮಾಧ್ಯಮಗಳೊಂದಿಗೆ ಸೋರಿಕೆ ಮಾಡದಂತೆ ಬಂಡಾಯ ನಾಯಕರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದರು.