ಗ್ರಾ.ಪಂ ಅಂಗಡಿ ಮಳಿಗೆಯ ಹಣ ಪಾವತಿಸದೆ ನಾನು ಪತ್ರಕರ್ತ ಎಂದು ಧಮ್ಕಿ ಹಾಕುತ್ತಿರುವ ವ್ಯಾಪಾರಿ: ಆರೋಪ

Prasthutha|

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯ ಕೋಳಿ ಮಾಂಸದ ಮಳಿಗೆಯನ್ನು ಹರಾಜಿನಲ್ಲಿ ಪಡೆದ ವ್ಯಾಪಾರಿ ಹಣವನ್ನು ಗ್ರಾಮ ಪಂಚಾಯತಿಗೆ ಪಾವತಿಸದೆ ಧಮ್ಕಿ ಹಾಕುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಆರೋಪಿಸಿದ್ದಾರೆ.

- Advertisement -

ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ತುಳಸಿ, ಕೋಳಿ ವ್ಯಾಪಾರಿ ಸುಬ್ರಮಣಿ ಎಂಬವರು ಮಳಿಗೆಯೊಂದನ್ನು 1,15,100 ರೂ ಗಳಿಗೆ ಬಿಡ್ ಮಾಡಿದ್ದು, ಮೊದಲು ರೂ 47 ಸಾವಿರ ಪಾವತಿಸಿರುತ್ತಾರೆ. ಮತ್ತು 55 ಸಾವಿರ ರೂಗೆ ಚೆಕ್ಕನ್ನು ನೀಡಿದ್ದರು. ನಂತರ ಬಾಕಿ ಹಣವನ್ನು ಕೇಳಿದರೆ ನೀವು ಕಟ್ಟಡ ಅಥವಾ ಮಳಿಗೆ ನೀಡಿಲ್ಲ
ಹಾಗಾಗಿ ಹಣ ಪಾವತಿಸುವುದಿಲ್ಲ ಎನ್ನುತ್ತಿದ್ದಾರೆಂದು ಆರೋಪಿಸಿದ ಅವರು, ಸುಬ್ರಮಣಿ ಅವರು ಆಗಾಗ ಗ್ರಾಮ ಪಂಚಾಯತಿಗೆ ಬಂದು ನಾನು ಪತ್ರಕರ್ತ ಹಣ ಕಟ್ಟಲು ಒತ್ತಾಯಿಸಿದರೆ ಪಂಚಾಯತಿ ವಿರುದ್ಧ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸುವುದಾಗಿ ಧಮ್ಕಿ ಹಾಕಿರುವುದಾಗಿ ಆರೋಪಿಸಿದರು.

ಸುಬ್ರಮಣಿ ಅವರು ಗ್ರಾಮ ಪಂಚಾಯತಿಯ ಹಿಂದಿನ ಅವಧಿಯ ಅಧ್ಯಕ್ಷರ ಜೊತೆಗೆ ಪೊನ್ನಂಪೇಟೆ ಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ತೆರಳಿ ವಿಷಯ ಪ್ರಸ್ತಾಪಿಸಿದಾಗ, ಎಲ್ಲರಿಗೂ ಒಂದೇ ನ್ಯಾಯ ಪಂಚಾಯತಿಗೆ ಬರಬೇಕಾದ ಹಣ ವಸೂಲಾತಿ ಆಗಲೇಬೇಕು ಅದು ಪಂಚಾಯತಿಯ ಕರ್ತವ್ಯ ಎಂದಿದ್ದಾರೆ. ಬಳಿಕ ಸುಬ್ರಮಣಿ ಅವರು ಗ್ರಾಮ ಪಂಚಾಯತಿ ವಿರುದ್ಧ ಪತ್ರಿಕೆಯಲ್ಲಿ ಸುದ್ದಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರು ಇದೇ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಈಗ ಏಕಾಏಕಿ ಮಳಿಗೆ ನೀಡಿಲ್ಲ, ಕಾನೂನು ಹೋರಾಟ ಮಾಡಲಾಗುವುದು ಎಂದು ಆಗಾಗ ಬೆದರಿಸುವುದಕ್ಕಿಂತ ಕಾನೂನು ಹೋರಾಟ ಮಾಡುವುದು ಉತ್ತಮ ಎಂದ ಅವರು, ಪತ್ರಿಕಾ ವರದಿಗಾರರಾಗಿ ಎಲ್ಲರಿಗೂ ನ್ಯಾಯದ ಬಾಗಿಲು ತೆರೆಯಬೇಕಾದವರು ತಮ್ಮ ಸ್ವಾರ್ಥಕ್ಕಾಗಿ ಪತ್ರಕರ್ತರ ದೃಢೀಕರಣ ಬೆಳೆಸುವುದು ಖಂಡನೀಯ ಎಂದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಹೇಶ್, ಸದಸ್ಯರಾದ ಆನಂದ್, ಪ್ರೇಮಾ ಹಾಗೂ ಲೋಕೇಶ್ ಇದ್ದರು.



Join Whatsapp