ಉಡುಪಿ: ಸಿಗರೇಟ್ ನಿಂದ ಸುಟ್ಟು ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬರೆಗಟ್ಟು ನಿವಾಸಿ ಪ್ರದೀಪ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕ್ರೂರ ಪತಿ ಸಿಗರೇಟಿನಿಂದ ಪತ್ನಿಗೆ ಚಿತ್ರಿಹಿಂಸೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದೆ.
ಪತ್ನಿಯನ್ನು ಆಕೆಯ ತಾಯಿಗೆ ನನ್ನ ಬಗ್ಗೆ ದೂರು ನೀಡಿದ್ದಾಳೆ ಎಂದು ಆರೋಪಿಸಿ ಪತಿ ಸಿಗರೇಟಿನಿಂದ ಚಿತ್ರಹಿಂಸೆ ನೀಡುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಯುವತಿ ತನಗೆ ಬೆನ್ನು ನೋವು, ಉಷಾರಿಲ್ಲ ಎಂದು ಹೇಳಿಕೊಳ್ಳುತ್ತಿದ್ದರೂ, ಪತಿ ಸಿಗರೇಟು ಹೊಗೆ ಬಿಡುತ್ತಾ ಉರಿಯುವ ಸಿಗರೇಟು ತುಂಡನ್ನು ಆಕೆಯ ಮುಖಕ್ಕೆ ತಾಗಿಸುತ್ತಾನೆ. ಅಲ್ಲದೆ, ತನ್ನದೇ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಾನೆ. ನಿನ್ನ ತಾಯಿ ನನಗೆ ಫೋನ್ ಮಾಡಿ ಹೆದರಿಸುತ್ತಿದ್ದಾಳೆ. ಆಕೆಯಲ್ಲಿ ನೀನೇ ಫೋನ್ ಮಾಡಿ, ನನಗೆ ಕರೆ ಮಾಡಿ ಕ್ಷಮೆ ಕೇಳುವಂತೆ ಮಾಡಬೇಕು ಎಂದು ಬೆದರಿಸುತ್ತಿರುವುದು ವೀಡಿಯೋದಲ್ಲಿದೆ.
ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.