ನವದೆಹಲಿ : ಸುಪ್ರೀಮ್ ಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಎನ್.ವಿ ರಮನ ಅವರು ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಾನವ ಹಕ್ಕುಗಳು ಮತ್ತು ವ್ಯಕ್ತಿಯ ಘನತೆ ‘ಪವಿತ್ರ’ ಎಂದು ಹೇಳಿದ್ದಾರೆ. ಮಾತ್ರವಲ್ಲದೇ ದೇಶದ ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕುಗಳನ್ನು ಅತಿಕ್ರಮಿಸುವುದರ ಕುರಿತು ಬೆಳಕು ಚೆಲ್ಲಿದರು.
ಕಸ್ಟಡಿ ಚಿತ್ರಹಿಂಸೆ ಮತ್ತು ಇತರ ಪೊಲೀಸ್ ದೌರ್ಜನ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಮಸ್ಯೆಗಳಾಗಿದೆ. ಅದೇ ರೀತಿ ಜಸ್ಟಿಸ್ ರಮಣ ಅವರು ಪೊಲೀಸ್ ಠಾಣೆಗಳಲ್ಲಿ ಬಂಧಿತರಿಗೆ ಕಾನೂನು ಪ್ರಾತಿನಿಧ್ಯವನ್ನು ತಡೆಯಲಾಗುತ್ತಿದೆಯೆಂದು ಕಳವಳ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳು ಮತ್ತು ವ್ಯಕ್ತಿಯ ಘನತೆಯ ಸಮಸ್ಯೆಗಳನ್ನು ‘ಪವಿತ್ರ’ ಎಂದು ಉಲ್ಲೇಖಿಸಿದರು. ನ್ಯಾಯವನ್ನು ಎಲ್ಲಾ ನಾಗರಿಕರಿಗೂ ಸಮಾನವಾಗಿ ಸಿಗುವಂತೆ ಮಾಡುವ ಅವಶ್ಯಕತೆ ನಮ್ಮೆಲ್ಲರ ಜವಬ್ದಾರಿಯೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಳೆದ ವರ್ಷ ಸುಮಾರು 1,697 ಜನರು ಕಸ್ಟಡಿಯಲ್ಲಿ (ನ್ಯಾಯಾಂಗ ಮತ್ತು ಪೊಲೀಸ್) ಸಾವನ್ನಪ್ಪಿದ್ದಾರೆ ಎಂದು ಕೇಂದ್ರವು ಸಂಸತ್ತಿಗೆ ತಿಳಿಸಿತ್ತು. ಈ ನಿಟ್ಟಿನಲ್ಲಿ ಸುಪ್ರೀಮ್ ಕೋರ್ಟ್ 2020 ರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪೊಲೀಸ್ ಠಾಣೆಗಳು ಮತ್ತು ಕೇಂದ್ರ ತನಿಖಾ ಸಂಸ್ಥೆಗಳಾದ್ಯಂತ ನೈಟ್ ವಿಷನ್ ಸಿಸಿಟಿವಿಗಳನ್ನು ಅಳವಡಿಸುವಂತೆ ಕೇಳಿಕೊಂಡಿತ್ತು. ಆದರೆ ಸುಪ್ರೀಮ್ ಕೋರ್ಟ್ ನ ಈ ಆದೇಶದ ಅನುಷ್ಠಾನ ಇನ್ನೂ ಪೂರ್ಣಗೊಂಡಿಲ್ಲವೆಂದು ಅಘಾತ ವ್ಯಕ್ತಪಡಿಸಿದರು.
ಗ್ರಾಮೀಣ ಮತ್ತು ದೂರದ ಪ್ರದೇಶದ ನಿವಾಸಿಗಳಿಗೆ ಹೆಚ್ಚಾಗಿ ನ್ಯಾಯ ನಿರಾಕರಿಸಲಾಗುತ್ತಿದೆಯೆಂದು ಸಿಜೆಇ ರಮನ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಕಾನೂನು ನೆರವು ಒದಗಿಸುವ ಕುರಿತು ಡಿಜಿಟಲ್ ಮಾದರಿಯನ್ನು ವ್ಯವಸ್ಥೆಗೊಳಿಸುವಂತೆ ಸರ್ಕಾರಕ್ಕೆ ಅವರು ಪತ್ರ ಬರೆದಿದ್ದಾರೆ. ಮಾತ್ರವಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಎನ್.ವಿ ರಮನ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.