ನೀರಿನ ಟ್ಯಾಂಕ್‌ ನಲ್ಲಿ ಮಾನವ ಮಲ; ಕಲುಷಿತ ನೀರು ಕುಡಿದ ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Prasthutha|

ಚೆನ್ನೈ: ಓವರ್‌ ಹೆಡ್‌ ನೀರಿನ ಟ್ಯಾಂಕ್‌ ಗೆ ಮಾನವ ಮಲ ಸುರಿದಿರುವ ಘಟನೆ ತಮಿಳುನಾಡಿನ ಪುದುಕ್ಕೋಟೈ ಜಿಲ್ಲೆಯ ಅನ್ನವಸಲ್‌ ಬ್ಲಾಕ್‌ನ ವೆಂಗೈವಯಲ್‌ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರು ವಾಸಿಸುವ ಪ್ರದೇಶದಲ್ಲಿ ನಡೆದಿದೆ.

- Advertisement -

ಗ್ರಾಮದ ಕೆಲ ಮಕ್ಕಳು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭ ಗ್ರಾಮಸ್ಥರು ವೈದ್ಯರ ನಿರ್ದೇಶನದಂತೆ  ನೀರಿನ ಟ್ಯಾಂಕನ್ನು ಪರಿಶೀಲಿಸಿದಾಗ ನೀರಿನಲ್ಲಿ ಮಾನವ ಮಲ ಸುರಿದಿರುವುದು ಪತ್ತೆಯಾಗಿದೆ.

ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ವೆಲ್ಲನೂರು  ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ. ಅನಾರೋಗ್ಯಕ್ಕೀಡಾದ ಮಗುವೊಂದರ ಹೆತ್ತವರು ನೀಡಿದ ದೂರಿನಂತೆ ಪೊಲೀಸರು ಸೆಕ್ಷನ್‌ 277, 328 ಅನ್ವಯ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

- Advertisement -

ದಲಿತರು ದೇವಸ್ಥಾನ ಪ್ರವೇಶ ಮಾಡಿದರು ಎಂಬ ದ್ವೇಷದಿಂದ ಮೇಲ್ಜಾತಿಯವರು ಈ ಅಮಾನವೀಯ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೀಡಾದವರ ಚಿಕಿತ್ಸೆಗೆಂದು ಗ್ರಾಮದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ.

ಪುದುಕ್ಕೊಟೈ ಕಲೆಕ್ಟರ್‌ ಕವಿತಾ ರಾಮು ಹಾಗೂ ಎಸ್‌ಪಿ ವಂದಿತಾ ಪಾಂಡೆ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದಲ್ಲಿರುವ ಜಾತಿ ತಾರತಮ್ಯದ ಬಗ್ಗೆ ದೂರಿರುವ ಗ್ರಾಮಸ್ಥರು, ಗ್ರಾಮದ ಅರುಲ್ ಮಿಗು ಅಯ್ಯನರ್‌ ದೇವಸ್ಥಾನಕ್ಕೆ ಪರಿಶಿಷ್ಟರಿಗೆ ಪ್ರವೇಶ ನಿಷೇಧಿಸಿರುವುದು ಮತ್ತು ಚಹಾ ಅಂಗಡಿಗಳಲ್ಲಿ ಎರಡು ಲೋಟ ವ್ಯವಸ್ಥೆ ಇರುವ ಬಗ್ಗೆ ತಿಳಿಸಿದ್ದಾರೆ.  ಕೂಡಲೇ ಗ್ರಾಮಸ್ಥರನ್ನು ದೇವಸ್ಥಾನದೊಳಗೆ ಕರೆದುಕೊಂಡು ಹೋದ ಕಲೆಕ್ಟರ್‌ ಮತ್ತು ಎಸ್‌ಪಿ, ಜಾತಿ ತಾರತಮ್ಯ ನಡೆಸುವವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Join Whatsapp