ದೆಹಲಿ ಗಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್ । ದೇಶದ ಹಲವು ರಾಜ್ಯಗಳಲ್ಲಿ ರೈಲು ಸಂಚಾರ ಸ್ಥಗಿತ !

Prasthutha|

ನವದೆಹಲಿ: ವಿವಾದಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಹಲವು ರಾಜ್ಯಗಳಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

- Advertisement -

ಸಂಯುಕ್ತ ಕಿಸಾನ್ ಮೋರ್ಚ (ಎಸ್.ಕೆ.ಎಂ) ಕರೆ ನೀಡಿದ ಈ ಪ್ರತಿಭಟನೆಗೆ 40 ಕ್ಕೂ ಹೆಚ್ಚು ಕೃಷಿ ಒಕ್ಕೂಟ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದು, ಇಂದು ಬೆಳಿಗ್ಗೆ 6 ಗಂಟೆಯಿಂದಲೇ ದೆಹಲಿ ಸ್ತಬ್ದವಾಗಿದೆ. ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಿದ ಪ್ರತಿಭಟನಕಾರರು, ಒಕ್ಕೂಟ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇಂದು ಬೆಳಿಗ್ಗೆಯಿಂದ ದೆಹಲಿ – ಮೀರತ್ ಎಕ್ಸ್ ಪ್ರೆಸ್ ಹೈವೇ ಅನ್ನು ಗಾಝಿಪುರ ಬಳಿ ನಿರ್ಬಂಧಿಸಲಾಗಿದೆ. ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ವಾಹನಗಳನ್ನು ದೆಹಲಿ ಪೊಲೀಸರು ಮತ್ತು ಅರೆಸೇನಾ ಪಡೆ ತಪಾಸಣೆ ನಡೆಸುತ್ತಿರುವುದರಿಂದ ಗುರ್ಗಾಂವ್, ನೋಯ್ಡಾ ಮತ್ತು ದೆಹಲಿಯ ಗಡಿಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಏರ್ಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

- Advertisement -

ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಕಚೇರಿ, ಶೈಕ್ಷಣಿಕ ಮತ್ತು ಇನ್ನಿತರ ಸಂಸ್ಥೆಗಳು, ಅಂಗಡಿಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಂದ್ ಮಾಡಲಾಗಿದ್ದು, ತುರ್ತು ಸೇವೆಗಳು ಅಭಾದಿತವಾಗಿವೆ.



Join Whatsapp