ಶಿವಮೊಗ್ಗ: ರೌಡಿಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಮುಖಂಡರ ಜೊತೆ ಇದ್ದರೆ ಅವನನ್ನು ಅರೆಸ್ಟ್ ಮಾಡುವ ಧೈರ್ಯ ಸಿಸಿಬಿ ಪೊಲೀಸರಿಗೆ ಹೇಗೆ ಬರುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವನ್ಯಾವನೋ ಒಬ್ಬ ಸುನೀಲನ ಜೊತೆ ಸೂರ್ಯ, ಮೋಹನ್ ಅವರೆಲ್ಲಾ ಹೋಗಿದ್ದಾರೆ. ಡಕಾಯಿತಿ, ಕೊಲೆ ಕೇಸ್ ನಲ್ಲಿ ಇದ್ದವನ ಜೊತೆ ಬಿಜೆಪಿ ಮುಖಂಡರೆಲ್ಲಾ ಸೇರಿಕೊಂಡಿದ್ದರು. ಇವರು ನೀತಿ ಹೇಳೋದು ಬದನೆಕಾಯಿ ತಿನ್ನೋಕಾ’ ಎಂದು ಪ್ರಶ್ನಿಸಿದರು.
ಸಿಸಿಬಿಯವರು ಸೈಲೆಂಟ್ ಸುನೀಲ್ ನನ್ನು ಹುಡುಕುತ್ತಿದ್ದಾರೆ. ಆದರೆ ಆತ ಬಿಜೆಪಿ ಮುಖಂಡರ ಜೊತೆಗೆ ಇದ್ದಾನೆ. ಆಡಳಿತ ಪಕ್ಷದ ಶಾಸಕರು, ಸಂಸದರ ಜೊತೆಗಿದ್ರೆ ಪೊಲೀಸರು ಆತನನ್ನು ಹೇಗೆ ಅರೆಸ್ಟ್ ಮಾಡುತ್ತಾರೆ. ಕಾನೂನು ಕ್ರಮ ಕೈಗೊಳ್ಳೋಕೆ, ಶಿಕ್ಷೆ ಕೊಡಿಸೋಕೆ ಆಗುತ್ತಾ ಎಂದು ಕೇಳಿದರು.
ಮುಹಮ್ಮದ್ ನಲಪಾಡ್ ಮೇಲೆ ಒಂದು ಕೇಸ್ ಇದೆ. ಆದರೆ, ಬಿಜೆಪಿ ನಾಯಕರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಗಳಿವೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ಅಮಿತ್ ಶಾ ಅವರೇ ಕೊಲೆ ಪ್ರಕರಣದಲ್ಲಿ ಇದ್ದರು. ಅವರ ವಿರುದ್ಧ ಗಡಿಪಾರು ಆದೇಶವಿತ್ತು. ಅಂತಹವರೇ ಈ ದೇಶದ ಹೋಂ ಮಿನಿಸ್ಟರ್ ಆಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಿರಲಿಲ್ಲವೇ? ಹೀಗಾಗಿ ನಲಪಾಡ್ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಏನು ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಬಂದರೆ ಕೊಲೆ ಸುಲಿಗೆ ಜಾಸ್ತಿಯಾಗತ್ತೆ ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಟಿ.ರವಿ ಇದ್ದಾನಲ್ಲಾ ಅವನು ಬಹಳ ಕಮ್ಯುನಲ್ ಫೆಲೊ (ಕೋಮುವಾದಿ). ಅವರಿಗೆ ಜಾತ್ಯತೀತತೆ ಅರ್ಥವಾಗೊಲ್ಲ, ಸಂವಿಧಾನವೂ ಗೊತ್ತಿಲ್ಲ. ಹೀಗಾಗಿ ಅವನ ಹೇಳಿಕೆಗೆಲ್ಲಾ ನಾನು ಉತ್ತರ ಕೊಡಲ್ಲ ಎಂದರು.