ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಯುವುದಕ್ಕೆ ಅಥವಾ ಸೇರಿಸುವುದಕ್ಕೆ ಫಾರಂ 7 ಅತ್ಯಗತ್ಯ. ಈ ಅರ್ಜಿಗಳು ಇಲ್ಲದೆ 27 ಲಕ್ಷ ಹೆಸರು ತೆಗೆದಿದ್ದು ಹೇಗೆ? ಇವುಗಳಿಗೆ ಸಹಿ ಹಾಕಿದವರು ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಸಮಯದಲ್ಲಿ ಚಿಲುಮೆ ಸಂಸ್ಥೆಗೆ ಬೇರೆ ಕೆಲಸವನ್ನು ಸರ್ಕಾರ ನೀಡಿರಬಹುದು. ಆದರೆ ಅವುಗಳಿಗೂ ಈ ಚುನಾವಣೆ ಪ್ರಕ್ರಿಯೆಗೂ ಬಹಳ ವ್ಯತ್ಯಾಸವಿದೆ. ಚುನಾವಣಾ ಆಯೋಗ ಅಧಿಕಾರಿಗಳ ಭೇಟಿಗೆ ಇಂದು ಸಮಯಾವಕಾಶ ಕೇಳಲಾಗಿತ್ತು. ಹಿರಿಯ ಅಧಿಕಾರಿ ಭೇಟಿ ಮಾಡಬೇಕಿದ್ದು, ನಾಳೆ ಸಮಯ ನೀಡಿದ್ದಾರೆ. ನಾಳೆ ಭೇಟಿ ಮಾಡಿ ನಮ್ಮ ದೂರು ನೀಡುತ್ತೇವೆ. ಈ ಪ್ರಕರಣದಲ್ಲಿ ಸಾಕಷ್ಟು ಕಾನೂನು ಅಂಶಗಳಿವೆ. ಮತದಾರರ ಮಾಹಿತಿ ತೆಗೆದುಕೊಳ್ಳುವ ಅವಕಾಶ ಯಾರಿಗೂ ಇಲ್ಲ. ರಾಜ್ಯದಲ್ಲಿ 8250 ಬೂತ್ ಗಳಿವೆ. ಪ್ರತಿ ಬೂತ್ ಗೆ ಒಬ್ಬರನ್ನು ನೇಮಕ ಮಾಡಬೇಕು. ಕೇವಲ ಚಿಲುಮೆ ಸಂಸ್ಥೆ ಮಾತ್ರವಲ್ಲ, 7 ಸಾವಿರಕ್ಕೂ ಹೆಚ್ಚು ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಎಲ್ಲಾ 28 ಕ್ಷೇತ್ರ ಚುನಾವಣಾಧಿಕಾರಿ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಒತ್ತಡದ ಮೇಲೆ ಈ ಕೆಲಸ ಮಾಡಿದ್ದೇವೆ ಎಂದು ಕೆಲವು ಬಂಧಿತ ಆರೋಪಿಗಳು ಹೇಳಿಕೆ ನೀಡಿರುವ ಸುದ್ದಿ ಬಗ್ಗೆ ಕೇಳಿದಾಗ, ‘ ಈ ವಿಚಾರ ನನಗೆ ಗೊತ್ತಿಲ್ಲ. ಆತ ಕಳ್ಳತನ ಮಾಡಿದ್ದರೆ, ಅದನ್ನು ಮಾಡಿಸಿದವರು ಯಾರು? ಹೀಗೆ ಮಾಡಬೇಕು ಎಂದು ಹೇಳಿಕೊಟ್ಟವರು ಯಾರು? ಅಧಿಕಾರಿಯೊಬ್ಬರು ಮೇಲಾಧಿಕಾರಿಗಳ ಆದೇಶದ ಮೇರೆಗೆ ನಾವು ಈ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದು, ಈ ಮೇಲಾಧಿಕಾರಿಗಳು ಯಾರು? ನಾನಾ, ಸಿದ್ದರಾಮಯ್ಯನವರಾ, ಯಡಿಯರಪ್ಪನವರಾ, ಬೊಮ್ಮಾಯಿ ಅವರಾ? ಈ ವಿಚಾರ ತನಿಖೆಯಾಗಬೇಕು. ಆದರೆ ಇದು ಇವರಿಂದ ಸಾಧ್ಯವಿಲ್ಲ. ನಾವು ಎಲ್ಲವನ್ನೂ ಈಗಲೇ ಬಹಿರಂಗ ಮಾಡುವುದಿಲ್ಲ. ದೂರು ಕೊಟ್ಟ ನಂತರ ಏನು ದೂರು ಕೊಟ್ಟಿದ್ದೇವೆ ಎಂದು ತಿಳಿಸುತ್ತೇವೆ ‘ ಎಂದರು.