ಟಿ20 ವಿಶ್ವಕಪ್‌ | ಪಾಕಿಸ್ತಾನ ತಂಡದ ಸೆಮಿಫೈನಲ್‌ ಕನಸು ಬಹುತೇಕ ಭಗ್ನ

Prasthutha|

ಪರ್ತ್‌: ಕ್ರಿಕೆಟ್‌ ಅಭಿಮಾನಿಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ ಝಿಂಬಾಬ್ವೆ, ಗುರುವಾರ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನವನ್ನು 1 ರನ್‌ಗಳ ಅಂತರದಲ್ಲಿ ರೋಚಕವಾಗಿ ಮಣಿಸಿದೆ. ಆ ಮೂಲಕ ಸೂಪರ್‌ 12ರ ಹಂತದಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.

- Advertisement -

ಮತ್ತೊಂದೆಡೆ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಪಾಕಿಸ್ತಾನದ ಮುಂದಿನ ಹಾದಿ ದುರ್ಗಮವಾಗಿದೆ. ಅರ್ಥಾತ್‌ ಸೆಮಿಫೈನಲ್‌ ರೇಸ್‌ನಿಂದ ಬಾಬರ್‌ ಅಝಂ ಬಳಗ ಈಗಾಗಲೇ ಒಂದು ಕಾಲು ಹೊರಗಿಟ್ಟಿದೆ.

ಭಾನುವಾರ ನಡೆದಿದ್ದ ಸೂಪರ್‌ 12ರ ಹಂತದ ಮೊದಲ ಪಂದ್ಯದಲ್ಲಿ ಪಾಕ್‌, ಭಾರತದ ವಿರುದ್ಧ ರೋಚಕ ಸೋಲು ಅನುಭವಿಸಿತ್ತು. ಗುರುವಾರ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ 130 ರನ್‌ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಲಾಗದೆ ಝಿಂಬಾಬ್ವೆಗೆ ಶರಣಾಗಿದೆ.

- Advertisement -

ಗ್ರೂಪ್‌ 2ರಲ್ಲಿ ಜಿಂಬಾಬ್ವೆ ಜಯ, ಉಳಿದ ತಂಡಗಳ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಲಿದೆ. ಅದರಲ್ಲೂ ಏಷ್ಯಾ ಕಪ್‌ ಫೈನಲಿಸ್ಟ್‌ ಪಾಕಿಸ್ತಾನದ ಸೆಮಿಫೈನಲ್‌ ಹಾದಿಯನ್ನು ನೋಡುವುದಾದರೆ.

  • ಸೂಪರ್‌ 12ರ ಹಂತದಲ್ಲಿ ಉಳಿದ ಮೂರು ಪಂದ್ಯಗಳನ್ನು ಪಾಕಿಸ್ತಾನ ಗೆಲ್ಲಲೇಬೇಕು
  • ಕೇವಲ ಗೆಲುವೊಂದೇ ಪಾಕ್‌ ಕೈ ಹಿಡಿಯದು. ಬದಲಾಗಿ ರನ್‌ ರೇಟ್‌ ಹೆಚ್ಚಾಗಿರಬೇಕಾದ ಅನಿವಾರ್ಯತೆಗೆ ಸಿಲುಕಿರುವ ಬಾಬರ್‌ ಪಡೆ, ಮುಂದಿನ ಮೂರೂ ಪಂದ್ಯಗಳನ್ನು ಭಾರೀ ಅಂತರದಿಂದ ಗೆಲ್ಲಬೇಕು.
  • ತನ್ನ ಗೆಲುವಿನ ಜೊತೆಗೆ ಇತರ ಪಂದ್ಯದ ಫಲಿತಾಂಶಗಳು ಸಹ ಪಾಕ್‌ ಪಾಲಿಗೆ ನಿರ್ಣಾಯಕ. ಹೀಗಾಗಿ ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಬೇಕು. ಒಂದು ವೇಳೆ ಫಲಿತಾಂಶವು ವ್ಯತಿರಿಕ್ತವಾದಲ್ಲಿ ಪಾಕಿಸ್ತಾನದ ಪ್ರಸಕ್ತ ವಿಶ್ವಕಪ್‌ ಮುಂದಿನ ಪಯಣ ಭಾನುವಾರವೇ ನಿರ್ಧಾರವಾಗಲಿದೆ.
  • ಝಿಂಬಾಬ್ವೆ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಭಾರತ, ನೆದರ್‌ಲ್ಯಾಂಡ್ಸ್‌ ಹಾಗೂ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಜಿಂಬಾಬ್ವೆ ಸೋಲು ಕಾಣವುದನ್ನು ಪಾಕಿಸ್ತಾನ ನಿರೀಕ್ಷಿಸುತ್ತಿದೆ.
  • ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಜೊತೆಗೆ ಬಾಂಗ್ಲಾದೇಶವೂ ಸಹ ತನ್ನ ಮುಂದಿನ ಪಂದ್ಯದಲ್ಲಿ ಸೋಲು ಕಾಣಲು ಪಾಕ್‌ ಪ್ರಾರ್ಥಿಸಬೇಕಿದೆ. 


Join Whatsapp