ಪ್ರಯಾಗ್ ರಾಜ್ ಬುಲ್ಡೋಜಿಂಗ್: ನೀರಿನ ಶುಲ್ಕ, ತೆರಿಗೆ ಕಟ್ಟಿದ ಬಳಿಕವೂ ಮನೆ ಧ್ವಂಸ

Prasthutha|

►►ತಂದೆ ಹೆಸರಿಗೆ ನೋಟೀಸ್ ನೀಡಿ, ನನ್ನ ತಾಯಿಗೆ ಸೇರಿದ ಮನೆಯನ್ನು ಉರುಳಿಸಿದ್ದಾರೆ ಎಂದ ಪುತ್ರಿ

- Advertisement -

ಲಕ್ನೋ: ಫೆಬ್ರವರಿ 8ರ ದಾಖಲೆಯಂತೆ ಪ್ರಯಾಗ್ ರಾಜ್ ಜಲ್ ಕಲ್ ವಿಭಾಗವು ನೀಡಿದ ಬಿಲ್ಲಿನಂತೆ ಪರ್ವೀನ್ ಫಾತಿಮಾ ಅವರು ರೂ. 4,578 ನೀರಿನ ಬಿಲ್ ಕಟ್ಟಿದ್ದಾರೆ. ಆದರೂ ಅಕ್ರಮ ಆರೋಪದಲ್ಲಿ ಮನೆಯನ್ನು ಕೆಡವಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಯಾಗ್ ರಾಜ್ ನಗರ ನಿಗಮ ಜನವರಿ 8ರಂದು ನೀಡಿದ ಸರ್ಟಿಫಿಕೇಟ್ ದಾಖಲೆಯಂತೆ ಮನೆ ನಂಬರ್ 39ಸಿ/2ಎ/1 ಪರ್ವೀನ್ ಫಾತಿಮಾ ಹೆಸರಿನಲ್ಲಿದ್ದು 2020-21ನೇ ವರುಷಕ್ಕೆ ಅವರು ಮನೆ ತೆರಿಗೆ ಕಟ್ಟಿದ್ದಾರೆ. ಆದರೆ ಪ್ರಯಾಗ್ ರಾಜ್ ಆಡಳಿತವು ಒಂದು ದಿನದ ನೋಟಿಸ್ ನೀಡಿ ಕಟ್ಟಡವು 1973ರ ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯ್ದೆ ಅನುಸರಿಸಿಲ್ಲ ಎಂದು ಭಾನುವಾರ ಕಟ್ಟಡವನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ.


ವಿಚಿತ್ರವೆಂದರೆ ಕೆಡವಲು ನೀಡಿದ ನೋಟಿಸ್ ಫಾತಿಮಾರ ಹೆಸರಿನಲ್ಲಿ ಇಲ್ಲದೆ ಅವರ ಪತಿ ಮುಹಮ್ಮದ್ ಜಾವೇದ್ ಹೆಸರಿನಲ್ಲಿದೆ. ಪ್ರವಾದಿವರ್ಯರ ಅವಹೇಳನದ ವಿರುದ್ಧದ ಹೋರಾಟದಲ್ಲಿ ಹಿಂಸಾಚಾರ ಪ್ರಚೋದಿಸಿದ್ದಾರೆ ಎಂದು ಜಾವೇದ್ ರನ್ನು ಬುಲ್ಡೋಜಿಂಗ್ ಗೆ ಮೊದಲ ದಿನ ಶನಿವಾರ ಬಂಧಿಸಲಾಗಿದೆ. “ಪಿಡಿಎ- ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರವು ನನ್ನ ತಂದೆಗೆ ನೋಟೀಸ್ ನೀಡಿ, ನನ್ನ ತಾಯಿಗೆ ಸೇರಿದ ಮನೆಯನ್ನು ಉರುಳಿಸಿದೆ. ಈ ಮನೆಯು ಮೂಲದಲ್ಲಿ ನನ್ನ ತಾಯಿ ಪರ್ವೀನ್ ಫಾತಿಮಾರ ತಂದೆ ಕಲೀಮುದ್ದೀನ್ ಸಿದ್ದಿಕಿಯವರಿಗೆ ಸೇರಿದೆ. ಎರಡು ದಶಕಗಳ ಹಿಂದೆ ಅಜ್ಜ ಈ ಮನೆಯನ್ನು ನನ್ನ ತಾಯಿಗೆ ಉಡುಗೊರೆ ನೀಡಿದ್ದಾರೆ. ಮೊದಲು ಒಂದು ಅಂತಸ್ತು ಇತ್ತು. ಅದರ ಮೇಲೆ ಎರಡು ಅಂತಸ್ತನ್ನು ಆಮೇಲೆ ಕಟ್ಟಲಾಗಿದೆ” ಎಂದು ಪರ್ವೀನ್ ಫಾತಿಮಾರ ಚಿಕ್ಕ ಮಗಳು ಸುಮೈಯ್ಯಾ ಫಾತಿಮಾ ಹೇಳಿದರು.

- Advertisement -


“ಇಷ್ಟು ಕಾಲದಿಂದಲೂ ಯಾವ ಸರಕಾರವೂ ಇದು ಅಕ್ರಮವಾಗಿ ಕಟ್ಟಿದ್ದು ಎಂದು ಹೇಳಿಲ್ಲ. ಮನೆ ತೆರಿಗೆ, ನೀರಿನ ಶುಲ್ಕ, ವಿದ್ಯುತ್ ಬಿಲ್ ಎಲ್ಲವೂ ನನ್ನ ತಾಯಿಯ ಹೆಸರಿನಲ್ಲಿದೆ. ಎಲ್ಲ ತೆರಿಗೆಗಳನ್ನೂ ಸರಿಯಾದ ಸಮಯದಲ್ಲಿ ಕಟ್ಟಲಾಗಿದೆ. ಭಾನುವಾರದವರೆಗೆ ಯಾವ ಅಧಿಕಾರಿಯೂ ನಮ್ಮ ಮನೆಯನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಹೇಳಿಲ್ಲ ಎನ್ನುತ್ತಾರೆ 19ರ ಹರೆಯದ ಸುಮೈಯ್ಯಾ.
ನಮ್ಮ ಮನೆಯ ಗೇಟಿಗೆ ಅಂಟಿಸಿದ ನೋಟೀಸಿನಲ್ಲಿ ‘25*60 ಅಡಿ ನೆಲ ಅಂತಸ್ತು ಮತ್ತು ಮೊದಲ ಮಹಡಿಯ ಕಟ್ಟಡವನ್ನು ಅನುಮತಿ ಪಡೆಯದೆ ಕಟ್ಟಲಾಗಿದೆ.’ ಎಂದು ಹೇಳಲಾಗಿದೆ.

ಜಾವೇದ್ ಕುಟುಂಬದ ವಕೀಲರಾದ ಕೆ. ಕೆ. ರಾಯ್ ಪ್ರಕಾರ, “ಭಾನುವಾರ ಉರುಳಿಸಿದ ಮನೆಯು ಮುಹಮ್ಮದ್ ಜಾವೇದ್ ರ ಪತ್ನಿ ಪರ್ವೀನ್ ಫಾತಿಮಾರಿಗೆ ಸೇರಿದೆ. ಶನಿವಾರ ಜಾವೇದ್ ಮುಹಮ್ಮದ್ ರಿಗೆ ನೋಟೀಸ್ ನೀಡಲಾಗಿದೆ. ಮುಸ್ಲಿಂ ಕಾನೂನಿನಂತೆ ಹೆಂಡತಿಯ ಆಸ್ತಿಯು ಗಂಡನಿಗೆ ಸೇರುವುದಿಲ್ಲ ಎಂದು ಹೇಳುತ್ತಾರೆ.


ಪಿಡಿಎ ಕಾರ್ಯದರ್ಶಿ ಅಜೀತ್ ಸಿಂಗ್ ಮತ್ತು ವಲಯಾಧಿಕಾರಿ ಅಜಯ್ ಕುಮಾರ್, ಹಾಗೇನಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ಅವರು ಕರೆ ಸ್ವೀಕರಿಸಲಿಲ್ಲ. “ನಾವು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಆ ಜಾಗದಲ್ಲಿ ಕಟ್ಟಡ ಕಟ್ಟಿದ ವ್ಯಕ್ತಿಗೆ ನೋಟೀಸು ನೀಡಿದ್ದೇವೆ. ಜಾಗ ಯಾರಿಗೆ ಸೇರಿದೆ ಎಂಬ ವಿಷಯವು ನಮಗೆ ಸಂಬಂಧಿಸಿಲ್ಲ” ಎಂದು ಹಿರಿಯ ಪಿಡಿಎ ಅಧಿಕಾರಿಯೊಬ್ಬರು ಹೇಳಿದರು.


“ಆ ಕಟ್ಟಡದ ಗೋಡೆಯ ಮೇಲೆ ಒಂದು ಕಲ್ಲಿನ ಫಲಕ ಇದ್ದು ಅದರಲ್ಲಿ ಜಾವೇದ್ ಎಂ. ಎಂದು ಬರೆದಿದೆ. ಆಚೀಚಿನವರೂ ಆ ಮನೆ ಮುಹಮ್ಮದ್ ಜಾವೇದ್ ಗೆ ಸೇರಿದೆ ಎಂದು ಹೇಳಿದರು. ಹಾಗಾಗಿ ಅವರಿಗೆ ನೋಟೀಸು ನೀಡಿದ್ದೇವೆ ಎಂದು ಪಿಡಿಎ ಅಧಿಕಾರಿ ಹೇಳಿದ್ದಾರೆ. ನಾನೀಗ ಸದ್ಯ ತಾಯಿಯ ಜೊತೆಗೆ ರೋಶನ್ ಬಾಗ್ ನಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದೇವೆ ಎಂದು ಸುಮೈಯ್ಯಾ ಹೇಳಿದರು.


“ಭಾನುವಾರ ಮನೆ ಉರುಳಿಸಲು ಬುಲ್ಡೋಜರ್ ತಂಡ ಮನೆಗೆ ಬಂದಿದ್ದಾಗ ನನ್ನ ಅತ್ತಿಗೆ ಜೀನತ್ ಮಸ್ರೂರ್ ಮಾತ್ರ ಅಲ್ಲಿ ಇದ್ದರು. ಸಂಬಂಧಿಕರ ನೆರವಿನಿಂದ ಆಕೆ ಕೆಲವೇ ಕೆಲವು ವಸ್ತುಗಳನ್ನು ಮನೆಯಿಂದ ಹೊರಗೆ ಸಾಗಿಸಲು ಸಾಧ್ಯವಾಯಿತು. ಆಕೆ ಎತ್ತಿಕೊಳ್ಳಲು ಸಾಧ್ಯವಾಗದ ವಸ್ತುಗಳ ಮೇಲೆಲ್ಲ ಬುಲ್ಡೋಜರ್ ಓಡಿದೆ ಎಂದು ಸುಮೈಯಾ ಅಂದಿನ ಘಟನೆಯನ್ನು ವಿವರಿಸುತ್ತಾರೆ.
ಮಸ್ರೂರ್ ಅವರು ಸುಮೈಯ್ಯಾರ ದೊಡ್ಡ ಅಣ್ಣನ ಪತ್ನಿ. ಇದಾದ ಮೇಲೆ ಅತ್ತಿಗೆಯವರು ಈಗ ತನ್ನೆರಡು ಚಿಕ್ಕ ಮಕ್ಕಳನ್ನು ಕರೆದುಕೊಂಡು ಜಿಲ್ಲೆಯ ತಮ್ಮ ತವರು ಮನೆಗೆ ಹೋಗಿದ್ದಾರೆ. ಸುಮೈಯ್ಯಾರ ಅಕ್ಕ ಆಫ್ರೀನ್ ಸಾಮಾಜಿಕ ಕಾರ್ಯಕರ್ತೆ ಮತ್ತು ಮಾಜಿ ಜೆಎನ್ ಯು ವಿದ್ಯಾರ್ಥಿನಿ. ಪೊಲೀಸರು ಈಗ ನಮ್ಮ ತಂದೆಯ ಮೇಲೆ ಸುಳ್ಳು ಮೊಕದ್ದಮೆ ಹೆಣೆದಿದ್ದಾರೆ. ನಮ್ಮ ಮನೆಯಲ್ಲಿ ಆಯುಧಗಳು ಸಿಕ್ಕಿದವೆಂಬುದು ಶುದ್ಧ ಸುಳ್ಳು ಎಂದೂ ಸುಮೈಯ್ಯಾ ಹೇಳಿದರು. ಪೊಲೀಸರು ಅದನ್ನು ಅಲ್ಲಗಳೆಯುತ್ತಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಖತ್ರಿ ಮತ್ತು ಎಸ್ಎಸ್ ಪಿ ಅಜಯ್ ಕುಮಾರ್ ಇರುವಿಕೆಯಲ್ಲೇ ಕಟ್ಟಡ ಒಡೆಯುವುದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp