ಬೆಂಗಳೂರು : ವ್ಯಾಪಾರಿಗಳು, ಸಾಫ್ಟ್‌ವೇರ್ ಇಂಜಿನಿಯರ್ ಗಳನ್ನು ಬಲೆಗೆ ಕೆಡವಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಜಾಲವನ್ನು ಪತ್ತೆಹಚ್ಚಿರುವ ಮೈಕೊ ಲೇಔಟ್ ಪೊಲೀಸರು ಯುವತಿ ಸೇರಿ ಮೂವರನ್ನು ಬಂಧಿಸಿದ್ದಾರೆ.ಮೈಕೊ ಲೇಔಟ್ ನ ತರಕಾರಿ ವ್ಯಾಪಾರಿಯೊಬ್ಬರು ಹನಿಟ್ರ್ಯಾಪ್ ಜಾಲಕ್ಕೆ ಕೆಡವಿ ಸುಲಿಗೆ ಮಾಡಿರುವ ಬಗ್ಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಯುವತಿ ಹಾಗೂ ಆಕೆಯ ಇಬ್ಬರು ಸಹಚರರನ್ನು ಬಂಧಿಸಿ 16 ಸಾವಿರ ನಗದು, ಕಾರು, ಮೊಬೈಲ್‌ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ದೂರುದಾರರು ತರಕಾರಿ ಮಳಿಗೆ ಇಟ್ಟುಕೊಂಡಿದ್ದು ಕಳೆದ. ಸೆ. 29ರಂದು ಮಳೆ ಬರುತ್ತಿದ್ದ ವೇಳೆ ಯುವತಿ ಅಂಗಡಿ ಬಳಿ ಬಂದು ನಿಂತುಕೊಂಡಿದ್ದರು. ಇದೇ ಸಂದರ್ಭದಲ್ಲೇ ಯುವತಿ ಹಾಗೂ ದೂರುದಾರ ನಡುವೆ ಮಾತುಕತೆ ಆಗಿತ್ತು ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಹೇಳಿದರು. ಪರಸ್ಪರ ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡಿದ್ದರು.’
ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದ ಅವರಿಬ್ಬರು, ನಿತ್ಯವೂ ಹೆಚ್ಚು ಮಾತನಾಡುತ್ತಿದ್ದರು. ‘ಚಿನ್ನಾ… ಚಿನ್ನಾ…’ ಎಂದು ಯುವತಿಯು ವ್ಯಾಪಾರಿಗೆ ಸಂದೇಶ ಕಳುಹಿಸುತ್ತಿದ್ದಳು. ಸಲುಗೆಯಿಂದ ಮಾತನಾಡುತ್ತಿದ್ದಳು. ಭೇಟಿಯಾಗೋಣವೆಂದು ಹೇಳಿದ್ದ ಯುವತಿ, ವ್ಯಾಪಾರಿಯನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆಸಿಕೊಂಡಿದ್ದಳು’ ಎಂದೂ ತಿಳಿಸಿದರು.
ದೂರುದಾರ ಹಾಗೂ ಯುವತಿ, ಪರಸ್ಪರ ಮಾತನಾಡುತ್ತ ಕುಳಿತಿದ್ದರು. ಇದೇ ಸಂದರ್ಭದಲ್ಲೇ ಸ್ಥಳಕ್ಕೆ ಬಂದಿದ್ದ ಇತರೆ ಆರೋಪಿಗಳು, ‘ನಮ್ಮ ಹುಡುಗಿ ಜೊತೆ ಏಕೆ ಕುಳಿತುಕೊಂಡಿದ್ದಿಯಾ? ನಿನ್ನನ್ನು ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಸಿದ್ದರು. ದೂರುದಾರರ ಬಳಿ ಇದ್ದ 5,ಸಾವಿರನಗದು, ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದರು. ಅವರ ಮೊಬೈಲ್‌ನ ಫೋನ್‌ಪೇ ಆ್ಯಪ್ ಮೂಲಕ 32 ಸಾವಿರ ವರ್ಗಾವಣೆ ಮಾಡಿಕೊಂಡಿದ್ದರು. ನಂತರ, ದೂರುದಾರರ ಕಾರು ಸಮೇತವೇ ಆರೋಪಿಗಳು ಪರಾರಿಯಾಗಿದ್ದು,ತನಗೇನು ಗೊತ್ತಿಲ್ಲದಂತೆ ಯುವತಿ ವರ್ತಿಸಿದ್ದರು. ಠಾಣೆಗೆ ಬಂದಿದ್ದ ವ್ಯಾಪಾರಿ, ಘಟನೆ ಬಗ್ಗೆ ದೂರು ನೀಡಿದ್ದರು.
ಯುವತಿಯನ್ನು ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ಜಾಲದ ಮಾಹಿತಿ ಲಭ್ಯವಾಯಿತು. ಯುವತಿಯನ್ನು ಬಂಧಿಸಿ, ಆಕೆ ನೀಡಿದ್ದ ಮಾಹಿತಿಯಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ಡಿಸಿಪಿ ಹೇಳಿದರು.