ಬ್ಯಾರೀಸ್ ಇಂಟೆಗ್ರೇಟೆಡ್ ಪಿಯು ಕಾಲೇಜು ಉದ್ಘಾಟನೆ ಹಾಗೂ “ಬ್ಯಾರೀಸ್ ಉತ್ಸವ್ 2024”
ಮಂಗಳೂರು: ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸಯ್ಯದ್ ಮುಹಮ್ಮದ್ ಬ್ಯಾರಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕನಸು ಕಂಡು ಅದನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ. ದೇಶ-ವಿದೇಶ ಸುತ್ತಿ ಶಿಕ್ಷಣ ಕ್ಷೇತ್ರದ ಹೊಸ ಮಜಲುಗಳನ್ನು ಅರಿತುಕೊಂಡಿದ್ದಾರೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರ ವಿಶೇಷ ಯೋಜನೆಗಳಿಗೆ ಗ್ರಾಮಸ್ಥರು ಸರ್ವ ರೀತಿಯ ಸಹಕಾರ ನೀಡಬೇಕಿದೆ ಎಂದು ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಬ್ಯಾರೀಸ್ ಇಂಟೆಗ್ರೇಟೆಡ್ ಪಿಯು ಕಾಲೇಜು ಶನಿವಾರ ಉದ್ಘಾಟನೆಗೊಂಡಿತು. ಮಂಗಳೂರು ವಿವಿ ಸಮೀಪದ ಇನೋಳಿಯಲ್ಲಿರುವ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಸುಸಜ್ಜಿತ ಅತ್ಯಾಧುನಿಕ ನೂತನ ಕಟ್ಟಡದಲ್ಲಿ ಕಾಲೇಜು ಕಾರ್ಯಾಚರಿಸಲಿದೆ. ರಾಜ್ಯ ವಿಧಾನ ಸಭೆಯ ಸ್ಪೀಕರ್ ಯುಟಿ ಖಾದರ್ ನೂತನ ಕಾಲೇಜನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಕ್ಷೇತ್ರ ವ್ಯಾಪ್ತಿಯ ಪಾವೂರು- ಬೋಳಿಯಾರು ಗ್ರಾಮದಲ್ಲಿ ತಲೆ ಎತ್ತಿನಿಂತ ಪ್ರತಿಷ್ಠಿತ ಬಿಐಟಿ ಸಂಸ್ಥೆಯು ಈ ಗ್ರಾಮದ ದಿಕ್ಕನ್ನೇ ಬದಲಾಯಿಸಿದೆ. ಮಂಗಳೂರು ಮಾತ್ರವಲ್ಲ, ದೇಶ- ವಿದೇಶದಲ್ಲಿ ಈ ಗ್ರಾಮವನ್ನು ಗುರುತಿಸುವಂತೆ ಬ್ಯಾರೀಸ್ ನವರು ಮಾಡಿದ್ದಾರೆ. ಆರ್ಥಿಕ ಲಾಭದ ಉದ್ದೇಶವಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮನ ಮಾತ್ರವಲ್ಲ ಅವರ ಮನೆಯನ್ನೂ ಬೆಳಗಿಸುವ ಕಾರ್ಯ ಮಾಡಿದ್ದಾರೆ. ಹಾಗಾಗಿ ಸಯ್ಯದ್ ಮುಹಮ್ಮದ್ ಬ್ಯಾರಿ ಅವರನ್ನು ನಾವೆಷ್ಟೇ ಅಭಿನಂದಿಸಿದರೂ ಸಾಲದು ಎಂದು ಖಾದರ್ ಸಂತಸ ವ್ಯಕ್ತಪಡಿಸಿದರು.
ಪಿಯುಸಿ ಕಲಿಕೆಯು ಮಕ್ಕಳ ಭವಿಷ್ಯವನ್ನು ರೂಪಿಸಲಿದೆ. ಅದನ್ನು ಮನಗಂಡ ಸಯ್ಯದ್ ಮುಹಮ್ಮದ್ ಬ್ಯಾರಿ ಈ ಗ್ರಾಮೀಣ ಭಾಗದಲ್ಲಿ ಪಿಯುಸಿ ಕಾಲೇಜು ಆರಂಭಿಸಿದ್ದಾರೆ. ಮೌಲ್ಯಾಧಾರಿತ ಶಿಕ್ಷಣ ಲಭಿಸುತ್ತಿರುವುದು ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ವಿಶೇಷತೆಯಾಗಿದೆ. ಹಾಗಾಗಿ ಈ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಕುಟುಂಬ ಮಾತ್ರವಲ್ಲ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದರಲ್ಲಿ ಸಂಶಯವಿಲ್ಲ ಎಂದ ಯುಟಿ ಖಾದರ್, ಮುಂದಿನ ದಿನಗಳಲ್ಲಿ ಕಾನೂನು ಕಾಲೇಜು ಸ್ಥಾಪಿಸಲು ಸಯ್ಯದ್ ಮುಹಮ್ಮದ್ ಬ್ಯಾರಿ ಮುಂದಾಗಬೇಕು ಎಂದು ಯುಟಿ ಖಾದರ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬ್ಯಾರೀಸ್ ಗ್ರೂಪ್ ನ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಬ್ಯಾರೀಸ್ ಎನ್ವಿರೋ ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS), ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಎಮರ್ಜಿಂಗ್ ಸಯನ್ಸಸ್ (BIES) ಹಾಗು ಬ್ಯಾರೀಸ್ ಪಾಲಿ ಟೆಕ್ನಿಕ್ ಗಳ ವಾರ್ಷಿಕೋತ್ಸವ “ಬ್ಯಾರೀಸ್ ಉತ್ಸವ್ 2024” ಕೂಡ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿ, ಮನೆ, ಕುಟುಂಬ, ಸಮಾಜ, ದೇಶದ ಭವಿಷ್ಯವು ಸುಶಿಕ್ಷಿತರ ಪರಿಶ್ರಮ ಅವಲಂಭಿಸಿದೆ. ಸಂಸ್ಥೆಯ ಮುಖ್ಯಸ್ಥ ಸಯ್ಯದ್ ಮುಹಮ್ಮದ್ ಬ್ಯಾರಿ ಅವರ ಕಠಿಣ ಪರಿಶ್ರಮದಿಂದ ಈ ಸಂಸ್ಥೆ ಇಷ್ಟು ದೊಡ್ಡದಾಗಿ ಬೆಳೆದಿದೆ. ವಿದ್ಯಾರ್ಥಿಗಳಿಗೆ ಅವರ ಶ್ರಮ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಹಾಗೂ ಆಡಳಿತ ಟ್ರಸ್ಟಿ ಸಯ್ಯದ್ ಮೊಹಮ್ಮದ್ ಬ್ಯಾರಿ, ನಾನು ಹುಟ್ಟಿದ್ದು ಮೂಡಿಗೆರೆ ಮತ್ತು ಬೆಳೆದದ್ದು ಕುಂದಾಪುರದಲ್ಲಿ. ಆದರೆ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದು ಮಾತ್ರ ಮಂಗಳೂರಿನಲ್ಲಿ ಎಂದರು.
1993ರಲ್ಲಿ ಮಂಗಳೂರಿನಲ್ಲಿ ಹಿಸ್‌ಗ್ರೇಸ್ ಶಿಕ್ಷಣ ಸಂಸ್ಥೆ ಆರಂಭಿಸಿದಾಗ ಇಷ್ಟು ದೊಡ್ಡ ಬ್ಯಾರೀಸ್ ಶಿಕ್ಷಣ ಸಂಸ್ಥೆ ಗಳು ತಲೆಎತ್ತಿ ನಿಲ್ಲಬಹುದೆಂದು ಊಹಿಸಿರಲಿಲ್ಲ. ಇದಕ್ಕೆಲ್ಲಾ ಅಲ್ಲಾಹನ ಅನುಗ್ರಹವೇ ಕಾರಣವಾಗಿದೆ ಎಂದರು.
ನಾನು ಯಾವುದೇ ಆರ್ಥಿಕ ಲಾಭದ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಿಲ್ಲ. ಆ ಉದ್ದೇಶವಿದ್ದಿದ್ದರೆ ಬೆಂಗಳೂರಿನಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದೆ. ಮಕ್ಕಳು ಜ್ಞಾನ ಸಂಪಾದಿಸಬೇಕು ಎಂಬ ಏಕೈಕ ಉದ್ದೇಶದಿಂದ ಈ ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುತ್ತಿದ್ದೇನೆ ಎಂದು ಹೇಳಿದರು.
ಶಿಕ್ಷಣ ಮಾರಾಟದ ಸರಕಲ್ಲ. ಅದು ಜ್ಞಾನ ಸಂಪಾದನೆಯ ಮಾರ್ಗವಾಗಿದೆ. ನೈತಿಕ ಮೌಲ್ಯವಿಲ್ಲದ್ದು ಶಿಕ್ಷಣವೇ ಅಲ್ಲ. ವಿದ್ಯಾರ್ಥಿಗಳು ಕೇವಲ ಪದವಿ ಗಳಿಕೆಗಾಗಿ ಮತ್ತು ರ್ಯಾಂಕ್‌ನ ಹಿಂದೆ ಬೀಳಬಾರದು. ಜ್ಞಾನ ಸಂಪಾದಿಸುವ ಏಕೈಕ ಗುರಿ ಹೊಂದಿರಬೇಕು ಮತ್ತು ಪ್ರಶ್ನಿಸುವ ಗುಣ ಸ್ವಭಾವ ಬೆಳೆಸಿಕೊಳ್ಳಬೇಕು ಎಂದು ಸಯ್ಯದ್ ಮುಹಮ್ಮದ್ ಬ್ಯಾರಿ ಸಲಹೆ ನೀಡಿದರು.
ಶಿಕ್ಷಣ ಮಾರಾಟದ ಸರಕಲ್ಲ. ಅದು ಜ್ಞಾನ ಸಂಪಾದನೆಯ ಮಾರ್ಗವಾಗಿದೆ. ನೈತಿಕ ಮೌಲ್ಯವಿಲ್ಲದ್ದು ಶಿಕ್ಷಣವೇ ಅಲ್ಲ. ವಿದ್ಯಾರ್ಥಿಗಳು ಕೇವಲ ಪದವಿ ಗಳಿಕೆಗಾಗಿ ಮತ್ತು ರ್ಯಾಂಕ್‌ನ ಹಿಂದೆ ಬೀಳಬಾರದು. ಜ್ಞಾನ ಸಂಪಾದಿಸುವ ಏಕೈಕ ಗುರಿ ಹೊಂದಿರಬೇಕು ಮತ್ತು ಪ್ರಶ್ನಿಸುವ ಗುಣ ಸ್ವಭಾವ ಬೆಳೆಸಿಕೊಳ್ಳಬೇಕು ಎಂದು ಸಯ್ಯದ್ ಮುಹಮ್ಮದ್ ಬ್ಯಾರಿ ಸಲಹೆ ನೀಡಿದರು.
ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಸಯ್ಯದ್ ಮುಹಮ್ಮದ್ ಬ್ಯಾರಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಸರಕಾರದ ವಿಶೇಷ ಅನುದಾನ ಪಡೆಯಲು ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಸಯ್ಯದ್ ಮುಹಮ್ಮದ್ ಬ್ಯಾರಿ ಅವರನ್ನು ನಾವು ಅಭಿನಂದಿಸುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಅಬೂಬಕರ್ ಸಿದ್ದೀಕ್ ಬ್ಯಾರಿ, ಅಬ್ದುಲ್ ರಹ್ಮಾನ್, ಡಾ. ಆಸೀಫ್, ಬಿಐಟಿ ಪ್ರಾಂಶುಪಾಲ ಡಾ. ಎಸ್‌ಐ ಮಂಜುರ್ ಬಾಷಾ, ಡಾ. ಅಝೀಝ್ ಮುಸ್ತಫಾ, ಖಲೀಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾರೀಸ್ ಇಂಟರ್‌ಗ್ರೇಟೆಡ್ ಪಿಯು ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಲತೀಫ್ ಸ್ವಾಗತಿಸಿದರು. ವಿದ್ಯಾರ್ಥಿನಿ ಹನ್ನಾ ಮುಹಮ್ಮದ್ ನಈಮ್ ಕಾರ್ಯಕ್ರಮ ನಿರೂಪಿಸಿದರು. ಡಾ. ವಿನುತಾ ಪಿಆರ್, ಪ್ರೊ. ಅಲೀಮಾ ಸಫಾ, ಪ್ರೊ. ಹನೀನಾ ಶೇಕ್, ಪ್ರೊ. ಝಹೀರ್ ಅಹ್ಮದ್, ಪ್ರೊ.ನಿಖಿತಾ, ಪ್ರೊ. ಜಾಯ್ಸನ್ ಮಿರಾಂದ, ಪ್ರೊ. ಮುಹಮ್ಮದ್ ಸಿನಾನ್ ಸಹಕರಿಸಿದರು.
ವಿಟಿಯು ವಿಶ್ವವಿದ್ಯಾನಿಲಯದಿಂದ ರ್ಯಾಂಕ್ ವಿಜೇತರಾದ ಬಿಐಟಿ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 2023-24ನೆ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಲಾಯಿತು.
ಹೊಸ ಪಿಯು ಕಾಲೇಜಿನಲ್ಲಿ ದಾಖಲಾತಿ ಆರಂಭವಾಗಿದ್ದು, ಈ ತಿಂಗಳಲ್ಲೇ ತರಗತಿಗಳು ಪ್ರಾರಂಭವಾಗಲಿವೆ. ಇಲ್ಲಿ ವಿಜ್ಞಾನ (PCMB ಮತ್ತು PCMC) ಹಾಗು ವಾಣಿಜ್ಯ (EBAC ) ವಿಷಯಗಳಲ್ಲಿ ಪಿಯು ಕೋರ್ಸ್‌ಗಳಿವೆ. ಅದ್ಭುತ ಪರಿಸರದಲ್ಲಿರುವ ಈ ಕಾಲೇಜಿನಲ್ಲಿ ಒತ್ತಡ ರಹಿತವಾಗಿ ಕಲಿಯಲು ವಿದ್ಯಾರ್ಥಿ ಕೇಂದ್ರಿತ ಸರ್ವ ಸವಲತ್ತುಗಳಿವೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅನುಭವೀ ಶಿಕ್ಷಕರು, ಕಲಿಯುವ ಅತ್ಯುತ್ತಮ ವಾತಾವರಣ, ಶಿಸ್ತುಬದ್ಧ ಹಾಗು ನೈತಿಕ ಮೌಲ್ಯಗಳ ಜೊತೆ ಕಲಿಕೆಗೆ ಪೂರಕ ಸೌಲಭ್ಯಗಳು ಇಲ್ಲಿವೆ ಎಂದು ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸಯ್ಯದ್ ಬ್ಯಾರಿ ತಿಳಿಸಿದ್ದಾರೆ