ಬೆಂಗಳೂರು: ಪೊಲೀಸ್ ಸಿಬ್ಬಂದಿ ಹಿತದೃಷ್ಟಿಗೆ ಔರಾದ್ಕರ್ ವರದಿ ಜಾರಿಯ ಸ್ಥಿತಿಗತಿ, ಪಿಇಬಿ ಮೂಲಕ ನಡೆಯುತ್ತಿರುವ ಪೊಲೀಸ್ ವರ್ಗಾವಣೆಯ ಮಿತಿ 2 ವರ್ಷಕ್ಕೆ ಎಂಬ ನಿಯಮ ಪಾಲನೆ ಹಾಗೂ ಸಂಚಾರಿ ಉಲ್ಲಂಘನೆಯಿಂದ ಸಂಗ್ರಹವಾದ ಮೊತ್ತ ಮತ್ತು ಅದರ ಬಳಕೆ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳಿದ್ದರು. ಈ ಸಂಬಂಧ ಗೃಹ ಸಚಿವರು ಉತ್ತರವನ್ನು ನೀಡಿದ್ದಾರೆ.
ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಈ ಪ್ರಕರಣಗಳಿಂದ ಕಳೆದ ಮೂರು ವರ್ಷದಲ್ಲಿ ಸಂಗ್ರಹಿಸಲಾದ ದಂಡ ಮೊತ್ತವು 660 ಕೋಟಿ 97 ಲಕ್ಷದ 96,854 (660,97,96,854 ರೂ.) ರೂಪಾಯಿಯಾಗಿದೆ ಎಂದು ಗೃಹಸಚಿವರು ಉತ್ತರಿಸಿದ್ದಾರೆ.
ದಂಡ ವಸೂಲಿಯಾದ ಮೊತ್ತವನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವರು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಪ್ರಕರಣಗಳಿಂದ ಸಂಗ್ರಹಿಸಲಾದ ಸ್ಥಳದಂಡ ಮೊತ್ತವನ್ನು ಸರ್ಕಾರದ ಖಜಾನೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಸಂಚಾರ ಸುಧಾರಣೆಗಾಗಿ ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಬಿಡುಗಡೆ ಮಾಡುವ ಸದರಿ ಅನುದಾನದಲ್ಲಿ ಈ ಕೆಳಕಂಡ ಯೋಜನೆಯ ಉದ್ದೇಶಗಳಿಗಾಗಿ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತದೆ.
1 ಸಿಗ್ನಲ್ ಲೈಟ್ಸ್, ಸಿ.ಸಿ, ಕ್ಯಾಮೆರ, ಹೆದ್ದಾರಿ ಗಸ್ತು ವಾಹನ, ಇಂಟರ್ಸೆಪ್ಟರ್ ವಾಹನ, ಪಿ.ಡಿ.ಎ ಡಿವೈಸ್ಗಳ ವಾರ್ಷಿಕ ನಿರ್ವಹಣೆಗಾಗಿ.
2. ಹೆದ್ದಾರಿ ಗಸ್ತು ವಾಹನ ಯೋಜನೆಯಡಿಯಲ್ಲಿ ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಹೆದ್ದಾರಿ ಗಸ್ತು ವಾಹನಗಳನ್ನು ಖರೀದಿಸಲು.
3. ಹೆದ್ದಾರಿಗಳಲ್ಲಿ/ಇನ್ನಿತರೆ ರಸ್ತೆಗಳಲ್ಲಿ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುವವರ ವಿರುದ್ಧ ಇಂಟರ್ಸೆಪ್ಟರ್ ವಾಹನಗಳ ಮೂಲಕ ಪ್ರಕರಣಗಳನ್ನು ದಾಖಲಿಸಲು ಇಂಟರ್ಸೆಪ್ಟರ್ ವಾಹನಗಳನ್ನು ಖರೀದಿಸಲು.
4. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪಿ.ಡಿ.ಎ ಡಿವೈಸ್ ಮಷಿನ್ಗಳನ್ನು ಖರೀದಿಸಲು.
5. ಸಂಚಾರ ಉಪಕರಣಗಳನ್ನು ಖರೀದಿಸುವ ಸಲುವಾಗಿ.
6. ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ, ವಾಹನ ಚಾಲಕರುಗಳಿಗೆ, ಸಂಚಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಗಳನ್ನು ಆಚರಿಸಲು.
7. ಬ್ಲಾಕ್ ಸ್ಪಾಟ್ ಆಟೋಮೇಟೆಡ್ ಟ್ರಾಫಿಕ್ ಸೇಫ್ಟಿ ಎನ್ ಫೋರ್ಸ್ಮೆಂಟ್ ಅನುಷ್ಠಾನಗೊಳಿಸಲು.
8. ಅಡಪ್ಟೀವ್/ಸಿಂಗ್ರನೈಸ್ ಸಿಗ್ನಲ್ ವಿತ್ ರೆಡ್ ಲೈಟ್ ವಯಲೇಷನ್ (RLVD) ಅನ್ನು ಅನುಷ್ಠಾನಗೊಳಿಸಲು.
9. 120 ಸ್ಥಳಗಳಲ್ಲಿ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ ನೇಷನ್ (ANPR) ಇಂಟಲಿಜೆಂಟ್ ರೆಕಗ್ನೇಷನ್ ಸಿಸ್ಟಂ ಆನ್ ಹೈಡೆನ್ಸಿಟಿ ಕಾರಿಡಾರ್ ಅನ್ನು ಅನುಷ್ಠಾನಗೊಳಿಸಲು.
10. ಸಂಚಾರ ಸುಧಾರಣೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು.
11. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ, ಭಾರತ ಸರ್ಕಾರದ ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ದೆಶನಗಳನ್ನು ಅನುಷ್ಠಾನಗೊಳಿಸಲು.
ಮೂರು ವರ್ಷದಲ್ಲಿ ಬಳಕೆ ಮಾಡಲಾದ ವಿವರಗಳ ಬಗ್ಗೆ ಕೇಳಲಾದ ಪ್ರಶ್ನೆಗೆ 2018-19ರಲ್ಲಿ ಬಿಡುಗಡೆ ಮಾಡಲಾದ ಅನುದಾನವು 2.46 ಕೋಟಿ ರೂ. ಆಗಿದ್ದರೆ, 2 ಕೋಟಿ 40 ಲಕ್ಷದ 87,522 ರೂಪಾಯಿಯನ್ನು ವೆಚ್ಚ ಮಾಡಲಾಗಿದೆ. 5,12,478 ರೂಪಾಯಿಯನ್ನು ಅಧ್ಯರ್ಪಣೆ ಮಾಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಅಲ್ಲದೆ ಟಿಪ್ಪಣಿಯೊಂದನ್ನು ನೀಡಿದ್ದು, 2020-21ನೇ ಸಾಲಿನಲ್ಲಿ ಬಿಡುಗಡೆ ಮಾಡಲಾದ ಒಟ್ಟು ಅನುದಾನದಲ್ಲಿ ಬಾಕಿ ಉಳಿದಿರುವ ಅನುದಾನ ರೂ.19,73,11,868/- ಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸರ್ಕಾರದ ಆದೇಶ ಸಂಖ್ಯೆ:ಟಿಡಿ 137 ಟಿಡಿಓ 2020, ದಿನಾಂಕ: 08.03.2021ರ ಪ್ರಕಾರ ಕೆ.ಆರ್.ಡಿ.ಸಿ.ಎಲ್. ಸಂಸ್ಥೆಯಲ್ಲಿ ಠೇವಣಿಯನ್ನಾಗಿಟ್ಟು ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡಿರುತ್ತಾರೆ ಎಂದು ಸಹ ಗೃಹ ಸಚಿವರು ತಿಳಿಸಿದ್ದಾರೆ.
ಔರಾದ್ಕರ್ ವರದಿಯಂತೆ ಜಾರಿಗೆ ಕ್ರಮ – ಗೃಹ ಸಚಿವರು
ಪೊಲೀಸ್ ಇಲಾಖೆಯ ಔರಾದ್ಕರ್ ವರದಿಯು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆಯೇ? ಹಾಗಿದ್ದಲ್ಲಿ, ಇದರಿಂದ ಎಷ್ಟು ಸಿಬ್ಬಂದಿಗಳಿಗೆ ಅನುಕೂಲವಾಗಿದೆ? ಈ ವರದಿಯಿಂದ ಎಷ್ಟು ಪೊಲೀಸ್ ಅಧಿಕಾರಿಗಳು ವಂಚಿತರಾಗಿದ್ದಾರೆ? ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಅವರು ಕೇಳಿದ ಪ್ರಶ್ನೆಗೆ ಗೃಹಸಚಿವರು ನೀಡಿರುವ ಉತ್ತರ ಹೀಗಿದೆ.
ಭಾಗಶಃ ಅಂಗೀಕರಿಸಲಾಗಿದೆ – ಗೃಹ ಸಚಿವರು
ಶ್ರೀ ರಾಘವೇಂದ್ರ ಔರಾದರ್ ವರದಿಯ ಶಿಫಾರಸ್ಸುಗಳನ್ನು ಭಾಗಶಃ ಅಂಗೀಕರಿಸಿರುವ ರಾಜ್ಯ ಸರ್ಕಾರವು ಅನುಯಾಯಿ, ಜಮೇದಾರ್ ಅನುಯಾಯಿ, ಪಿ.ಎಸ್.ಐ ಹಾಗೂ ಪೊಲೀಸ್ ಉಪಾಧೀಕ್ಷಕರುಗಳ ವೇತನ ಶ್ರೇಣಿಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವೃಂದದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ವೇತನ ಶ್ರೇಣಿಗಳನ್ನು ಪರಿಷ್ಕರಣೆ ಮಾಡಿರುತ್ತದೆ.
ಅಧಿಕಾರಿ ಮತ್ತು ಸಿಬ್ಬಂದಿಯವರ ಭತ್ಯೆಗಳ ಪರಿಷ್ಕರಣೆಗೆ ಮಾಡಿದ್ದ ಶಿಫಾರಸ್ಸುಗಳಲ್ಲಿ ಗಂಡಾಂತರ ಭತ್ಯೆ, ಶ್ರಮದಾನ ಭತ್ಯೆ ಹಾಗೂ ಸದೃಢ ಭತ್ಯೆಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಭತ್ಯೆಗಳನ್ನು ಪರಿಷ್ಕರಣೆ ಮಾಡಲಾಗಿರುತ್ತದೆ.
ಶ್ರೀ ರಾಘವೇಂದ್ರ ಔರಾದರ್ ಸಮಿತಿಯ ವರದಿಯು ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ್ದಾಗಿದ್ದು, ಈ ವರದಿಯಿಂದ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮುಂಬಡ್ತಿಯಿಂದ ವಂಚಿತರಾಗಿರುವುದಿಲ್ಲ.
ಪೊಲೀಸ್ ಇಲಾಖೆಯಲ್ಲಿ ಕಾಲ-ಕಾಲಕ್ಕೆ ಉಂಟಾಗುವ ರಿಕ್ತವಾಗುವ ಹುದ್ದೆಗಳನ್ನು ಮುಂಚಿತವಾಗಿಯೇ ಪರಿಗಣನೆಗೆ ತೆಗೆದುಕೊಂಡು ಅರ್ಹ ಅಧಿಕಾರಿ/ಸಿಬ್ಬಂದಿಯವರಿಗೆ ಪದೋನ್ನತಿ ನೀಡಲು ಈಗಾಗಲೇ ಕ್ರಮ ವಹಿಸಲಾಗುತ್ತಿದೆ.
ವೇತನ ಶ್ರೇಣಿ ಪರಿಷ್ಕರಣೆಯ ಅನುಷ್ಠಾನ:
ಶ್ರೀ ರಾಘವೇಂದ್ರ ಔರಾಸ್ಕರ್ ಸಮಿತಿಯು ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಯವರುಗಳ ಭತ್ಯೆಗಳ ಪರಿಷ್ಕರಣೆಗೆ ಮಾಡಿದ್ದ ಶಿಫಾರಸ್ಸುಗಳಲ್ಲಿ ಗಂಡಾಂತರ ಭತ್ಯೆ, ಶ್ರಮದಾನ ಭತ್ಯೆ ಹಾಗೂ ಸದೃಢ ಭತ್ಯೆಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಭತ್ಯೆಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಒಟ್ಟಾರೆಯಾಗಿ ಶ್ರೀ ರಾಘವೇಂದ್ರ ಔರಾದರ್ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನದಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 84773 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನುಕೂಲವಾಗಿದೆ.
ಪೊಲೀಸ್ ವರ್ಗಾವಣೆಯಿಂದ ಕಾನೂನು ಸುವ್ಯವಸ್ಥೆಗೆ ಪರಿಣಾಮವಾಗದು – ಗೃಹ ಸಚಿವರು
ರಾಜ್ಯದಲ್ಲಿ ಕಾನೂನು ಬಲವರ್ಧನೆಗೆ ಪಿ.ಇ.ಬಿ (ಪೊಲೀಸ್ ಎಷ್ಟಾಬ್ಲಿಷ್ಮೆಂಟ್ ಬೋರ್ಡ್) ಮೂಲಕ ನಿರೀಕ್ಷಕರುಗಳ ಹಾಗೂ ಅಧಿಕಾರಿಗಳ ವರ್ಗಾವಣೆಗಳನ್ನು 2 ವರ್ಷಕ್ಕೆ ನಿಗದಿಪಡಿಸಿದ್ದು, ಒಂದು ವರ್ಷ ಪೂರೈಸಿದ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಲಾಗುತ್ತಿದ್ದು, ಇದರಿಂದ ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುವುದಿಲ್ಲವೇ? ಹಾಗೂ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಕನಿಷ್ಠ 2 ವರ್ಷಕ್ಕೆ ನಿಗದಿಪಡಿಸಲು ಸರ್ಕಾರ ಚಿಂತಿಸಿದೆಯೇ? ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವರು ಈ ಕೆಳಗಿನ ಉತ್ತರ ನೀಡಿದ್ದಾರೆ.
ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 60 ಪೊಸಇ 2009, ದಿನಾಂಕ: 24/08/2009 ರಂತೆ ಪೊಲೀಸ್ ಠಾಣೆಯ ಪ್ರಭಾರ ಹೊಂದಿರುವ ಠಾಣಾಧಿಕಾರಿ, ಪೊಲೀಸ್ ವೃತ್ತದ ಪ್ರಭಾರ ಹೊಂದಿರುವ ಸರ್ಕಲ್ ಇನ್ಸ್ಪೆಕ್ಟ್ರರ್ ಮತ್ತು ಉಪ ವಿಭಾಗದ ಪ್ರಭಾರವನ್ನು ಹೊಂದಿರುವ ಪೊಲೀಸ್ ಉಪ ವಿಭಾಗಾಧಿಕಾರಿಗಳು ಕನಿಷ್ಠ ಕನಿಷ್ಠ 02 ಪದಾವಧಿ ಹೊಂದಿರತಕ್ಕದ್ದು. ವರ್ಷಗಳ ತದನಂತರ ಕರ್ನಾಟಕ ಪೊಲೀಸ್ (ತಿದ್ದಪಡಿ) ಕಾಯ್ದೆ 2013, ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 74 ಸಸನ 2012, ದಿನಾಂಕ:18.06.2013ರಲ್ಲಿ ಕನಿಷ್ಠ ಪದಾವಧಿಯನ್ನು ಒಂದು ವರ್ಷದ ಅವಧಿ ಎಂದು ತಿದ್ದುಪಡಿಯನ್ನು ತರಲಾಗಿರುತ್ತದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಗೃಹ ಸಚಿವರು ಉತ್ತರ ನೀಡಿದ್ದಾರೆ.