ಬೆಂಗಳೂರು: ಪಿಎಸ್’ಐ ನೇಮಕಾತಿ ಹಗರಣದಲ್ಲಿ ಶಾಸಕರು, ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಸಾಕ್ಷ್ಯಗಳಿದ್ದರೂ ತನಿಖೆ ನಡೆಯುತ್ತಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಂತಹವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಪಿಎಸ್’ಐ ನೇಮಕಾತಿ ಅಕ್ರಮದಲ್ಲಿ ಮೂವರು ಶಾಸಕರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಶಾಮೀಲಾಗಿರುವ ಕುರಿತು ಖುದ್ದಾಗಿ ಸಾಕ್ಷ್ಯ ನೀಡಿದ್ದರೂ ತನಿಖೆ ನಡೆಸುತ್ತಿಲ್ಲ ಎಂಬುದಾಗಿ ಅಭ್ಯರ್ಥಿಯೊಬ್ಬರು ಗೃಹ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೊ ತುಣುಕುಗಳನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅಭ್ಯರ್ಥಿಯೊಬ್ಬರು ನೇರವಾಗಿ ಜ್ಞಾನೇಂದ್ರ ಅವರನ್ನೇ ಭೇಟಿಮಾಡಿ ಪಿಎಸ್’ಐ ನೇಮಕಾತಿ ಅಕ್ರಮದಲ್ಲಿ ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸಾಕ್ಷ್ಯಗಳನ್ನು ನೀಡಿದ್ದರು. ಆದರೆ, ಆ ಬಗ್ಗೆ ತನಿಖೆಯೇ ನಡೆದಿಲ್ಲ. ಸಾಕ್ಷ್ಯ ಒದಗಿಸಿದ್ದ ವ್ಯಕ್ತಿಯೇ ಗೃಹ ಸಚಿವರಿಗೆ ಕರೆಮಾಡಿ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಪ್ರಕರಣದ ತನಿಖೆ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ’ ಎಂದು ಹೇಳಿದರು.
ತಾಂತ್ರಿಕ ಕಾರಣದಿಂದ ಆರೋಪಿಗಳಿಗೆ ಜಾಮೀನು ದೊರಕಿದೆ ಎಂದು ಗೃಹ ಸಚಿವರು ಸಮರ್ಥಿಸಿಕೊಂಡಿದ್ದಾರೆ. ತನಿಖೆಯಲ್ಲಿನ ವೈಫಲ್ಯದ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.