ಅಕ್ರಮ ಗೋವುಗಳ ಮಾರಾಟ, ಸಾಗಾಟಕ್ಕೆ ನಿಯಂತ್ರಣ ಹೇರಲು ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

Prasthutha|

ಮೈಸೂರು: ಅಕ್ರಮ ಗೋವುಗಳ ಸಾಗಾಟ ಹಾಗೂ ಮಾರಾಟ ಚಟುವಟಿಕೆಗಳನ್ನು ಮಟ್ಟ ಹಾಕಬೇಕು. ಗ್ಯಾಂಬ್ಲಿಂಗ್ ಮತ್ತು ಮಟ್ಕಾ ಅಂಥ ದುರ್ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಸಿಬ್ಬಂದಿಗೆ ನಿರ್ದೇಶಿಸಿದ್ದಾರೆ.
ಮೈಸೂರು ಪೊಲೀಸ್ ಜಿಲ್ಲಾ ಘಟಕದ ಪರಾಮರ್ಶನ ಸಭೆಯಲ್ಲಿ ಇಂದು ಭಾಗವಹಿಸಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಇತ್ತೀಚೆಗೆ ಆನ್ಲೈನ್ ಗ್ಯಾಂಬಲಿಂಗ್ ನಿಷೇಧಿಸಿ ಕಾನೂನನ್ನು ತಂದಿದ್ದು ಅದನ್ನು ನಿರ್ದಾಕ್ಷಿಣ್ಯವಾಗಿ, ಜಾರಿಗೆ ತರಬೇಕು ಎಂದು ತಿಳಿಸಿದರು.
ಜಿಲ್ಲೆಯ ಕೆಲವು ಭಾಗಗಳಲ್ಲಿ ಅಕ್ರಮ ಗೋವುಗಳ ಮಾರಾಟ ಹಾಗೂ ಸಾಗಾಟ ಚಟುವಟಿಕೆ ಗಳ ಬಗ್ಗೆ ಮಾಹಿತಿಯಿದೆ. ಅದನ್ನು ತಕ್ಷಣವೇ ನಿಲ್ಲಿಸಬೇಕು. ನೆರೆಯ ರಾಜ್ಯ ಕೇರಳ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಅನ್ನು ಬಿಗಿಗೊಳಿಸಿ ಕ್ರಮ ತೆಗೆದುಕೊಳ್ಳಿ ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳಿದ್ದು, ತಕ್ಷಣವೇ, ಅಂತವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಲು ವಿಫಲವಾದರೇ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಮಟ್ಕಾ ದಂಧೆ ನಿಲ್ಲಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಗ್ಯಾಂಬ್ಲಿಂಗ್, ಕ್ರಿಕೆಟ್ ಬೆಟ್ಟಿಂಗ್, ಆನ್ಲೈನ್ ಗೇಮ್ಸ್ ಗಳು ಬಂದ್ ಆಗಿವೆ. ಕ್ಲಬ್ ಗಳ ನಿಯಂತ್ರಣ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಜಿಲ್ಲಾ ಪೊಲೀಸ್ ಮುಖ್ಯಸ್ಥ ಆರ್ ಚೇತನ್, ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ, ಐಜಿ ಪ್ರವೀಣ್ ಮಧುಕರ್ ಪವಾರ್ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಸ್ಥಿತರಿದ್ದರು.



Join Whatsapp