ಕೋವಿಡ್ ದೃಢಪಟ್ಟರೆ ಏಳು ದಿನ ಹೋಮ್ ಐಸೊಲೇಷನ್ ಕಡ್ಡಾಯ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ಕೋವಿಡ್ ಪಾಸಿಟಿವ್ ದೃಢಪಟ್ಟರೆ ಏಳು ದಿನ ಹೋಮ್ ಐಸೊಲೇಷನ್ ಕಡ್ಡಾಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸೋಂಕಿತರ ಮನೆಗಳಿಗೆ ಸರಕಾರಿ ವೈದ್ಯರು ಭೇಟಿ ನೀಡಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ.

- Advertisement -

ವಿಧಾನಸೌಧದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಪಾಸಿಟಿವ್ ದೃಢಪಟ್ಟವರು ಕಡ್ಡಾಯವಾಗಿ 7 ದಿನ ಹೋಮ್ ಐಸೊಲೇಷನ್‌ನಲ್ಲಿ ಇರಬೇಕು. ಸೋಂಕು ದೃಢಪಟ್ಟ ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ 7 ದಿನಗಳ ರಜೆ ಕೊಡಬೇಕು. ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವರೆಗೆ ರಜೆ ಕೊಡಿಸುವ ಕುರಿತು ಸರಕಾರದಿಂದ ಮಾರ್ಗಸೂಚಿ ಹೊರಡಿಸಬೇಕು ಎಂದು ಹೇಳಿದ್ದಾರೆ.

ಮಕ್ಕಳಲ್ಲಿ ವೇಗವಾಗಿ ಸೋಂಕು ಹರಡುವ ಸಾಧ್ಯತೆ ಇದೆ ಎಂದ ಸಚಿವರು, ಜ್ವರ, ನೆಗಡಿ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಾರದು ಎಂದು ಸೂಚಿಸಿದ್ದಾರೆ.

- Advertisement -

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ರಚನೆ ಮಾಡಬೇಕು. ಇಲ್ಲಿನ ವಿಕ್ಟೋರಿಯಾ, ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ಮಾಡಬೇಕು. ಐಸಿಯು ಬೆಡ್, ಹಾಗೂ ಐಸೊಲೇಷನ್ ಬೆಡ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ.

ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ, ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಟಿಎಸಿ ಸಮಿತಿ ಅಧ್ಯಕ್ಷ ಡಾ. ರವಿ ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Join Whatsapp