ಬೆಂಗಳೂರು: ವಾಯು ವಿಹಾರಕ್ಕೆಂದು ಉದ್ಯಾನವನಕ್ಕೆ ಬಂದ ಕುಳಿತಿದ್ದ ಯುವಕ-ಯುವತಿಯನ್ನು ಹೆದರಿಸಿ 1000 ರೂ. ವಸೂಲಿ ಮಾಡಿದ್ದ ಹೋಮ್ ಗಾರ್ಡ್ ಸಿಬ್ಬಂದಿಯನ್ನು ಎಚ್’ಎಎಲ್ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಬಂಧಿತ ಹೋಂ ಗಾರ್ಡ್ ಸಿಬ್ಬಂದಿ. ಬಿಬಿಎಂಪಿಯಿಂದ ಕುಂದಲಹಳ್ಳಿ ಕೆರೆ ಭದ್ರತೆಗೆ ನಿಯೋಜನೆಗೊಂಡಿದ್ದ ಮಂಜುನಾಥ್ ಮಂಗಳವಾರ ಬೆಳಗ್ಗೆ ಪಾರ್ಕ್’ನಲ್ಲಿ ಕುಳಿತಿದ್ದ ಹುಡುಗ ಮತ್ತು ಹುಡುಗಿಯನ್ನು ಹೆದರಿಸಿ ಹಣ ವಸೂಲಿ ಮಾಡಿದ್ದರು. ಗೂಗಲ್ ಪೇ ಮೂಲಕ ಜೋಡಿ ಹಣ ಪಾವತಿಸಿತ್ತು.
ಈ ಬಗ್ಗೆ ಯುವತಿ ಟ್ವಿಟರ್ ಮೂಲಕ ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಳು. ಹಣ ವಸೂಲಿ ಮಾಡಿದ ಸಿಬ್ಬಂದಿಯ ಬೈಕ್ ಫೋಟೋವನ್ನು ಟ್ವಿಟ್ಟರ್’ಗೆ ಅಪ್ ಲೋಡ್ ಮಾಡಿದ್ದರು. ನಾವೇನು ತಪ್ಪು ಮಾಡದಿದ್ದರೂ ನಮ್ಮ ಮೇಲೆ ನೈತಿಕ ಪೊಲೀಸ್ ಗಿರಿ ತೋರಲಾಗಿದೆ ಎಂದು ಆರೋಪ ಮಾಡಿದ್ದಳು.
ಬಂಧಿತ ಆರೋಪಿ ಪೊಲೀಸ್ ಕಾನ್ಸ್’ಟೇಬಲ್ ಅಲ್ಲ, ಆತ ಓರ್ವ ಹೋಂ ಗಾರ್ಡ್ ಎಂದು ಎಚ್’ಎಎಲ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.