ಮಂಗಳೂರು: ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಗೃಹರಕ್ಷಕ ಸಿಬ್ಬಂದಿ ಚಿಕಿತ್ಸೆ ಫಲಿಸದೆ ಸಾವು

Prasthutha|

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಸಮೀಪದ ಉದ್ಯಾವರದಲ್ಲಿ ಇಂದು ಬೆಳಗಿನ ಜಾವ ಕಾರಿಗೆ ಟ್ಯಾಂಕರ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮುಲ್ಕಿ ಸಮೀಪದ ಕುಬೆವೂರು ನಿವಾಸಿ ರಾಕೇಶ್ ಪೂಜಾರಿ (27) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತ ರಾಕೇಶ್ ಪೂಜಾರಿ ಮುಲ್ಕಿ ಗೃಹರಕ್ಷಕದಳದ ಸಿಬ್ಬಂದಿಯಾಗಿದ್ದು ರಾತ್ರಿ ಪಾಳಿಯಲ್ಲಿ ಮುಲ್ಕಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬೆಳಗಿನ ಜಾವ ಉಡುಪಿಯ ಮಲ್ಪೆಯಲ್ಲಿರುವ ತಮ್ಮ ಅಕ್ಕನ ಮನೆಗೆ ಹೊರಟಿದ್ದರು. ಅಕ್ಕ ಬಾಣಂತಿಯಾಗಿದ್ದು ಮನೆಗೆ ಕರೆದುಕೊಂಡು ಬರಲು ಮುಲ್ಕಿಯಿಂದ ಕಾರಿನಲ್ಲಿ ಹೋಗುತ್ತಿರುವ ವೇಳೆ ಉಡುಪಿ ಸಮೀಪ ಉದ್ಯಾವರ ಸಮೀಪಿಸುತ್ತಿದ್ದಂತೆ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಸಂದರ್ಭ ಕಾರಿನ ಚಾಲಕನಾಗಿದ್ದ ರಾಕೇಶ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತೀರಾ ಬಡಕುಟುಂಬವಾಗಿರುವ ರಾಕೇಶ್ ಶೆಟ್ಟಿ ತಂದೆ ಮುಂಬೈಯಲ್ಲಿ ಉದ್ಯೋಗದಲ್ಲಿದ್ದು ಕೊರೊನ ಲಾಕ್ಡೌನ್ ದಿಂದಾಗಿ ಊರಿಗೆ ಬಂದು ನೆಲೆಸಿದ್ದರು. ತಾಯಿ ಬೀಡಿ ಕಟ್ಟುವ ವೃತ್ತಿ ನಡೆಸುತ್ತಿದ್ದು, ಮೃತ ರಾಕೇಶ್ ರಾತ್ರಿ ಪಾಳಿಯಲ್ಲಿ ಮುಲ್ಕಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ, ಸೇವೆ ಸಲ್ಲಿಸುತ್ತಿದ್ದರೆ ಹಗಲಿನಲ್ಲಿ ಮಣಿಪಾಲದಲ್ಲಿ ಕೆಲಸಕ್ಕಿದ್ದರು ಎನ್ನಲಾಗಿದೆ. ಕುಟುಂಬದ ಆಧಾರ ಸ್ತಂಭವಾಗಿದ್ದ ರಾಕೇಶ್ ನಿಧನದಿಂದ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ.



Join Whatsapp