ಮಂಗಳೂರು ಸ್ಫೋಟಕ್ಕೆ ಗೃಹ ಇಲಾಖೆಯ ವೈಫಲ್ಯವೇ ಕಾರಣ: ಸಿದ್ದರಾಮಯ್ಯ ಆರೋಪ

Prasthutha|

ಬೆಂಗಳೂರು: ಮಂಗಳೂರಿನ ಹೊರ ವಲಯದ ಗರೋಡಿಯಲ್ಲಿ ನಡೆದ ಆಟೋ ಸ್ಫೋಟಕ್ಕೆ ರಾಜ್ಯ ಗೃಹ ಇಲಾಖೆಯ ವೈಫಲ್ಯವೇ ನೇರಾ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

- Advertisement -

ಘಟನೆಯ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಭಯೋತ್ಪಾದಕ ಕೃತ್ಯ ಎಂದು ದೃಢೀಕರಿಸಿರುವ ಮಂಗಳೂರು ನಗರದ ಬಾಂಬು ಸ್ಫೋಟದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಳವಳಕಾರಿಯಾದ ಈ ಘಟನೆಯ ಬಗ್ಗೆ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳೂರು ಬಾಂಬು ಸ್ಫೋಟ ಮತ್ತೊಮ್ಮೆ ರಾಜ್ಯದ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ. ಈ ಘಟನೆಯ ಬಗ್ಗೆ ಊಹಾಪೋಹಗಳ ಸುದ್ದಿಗಳನ್ನು ನಂಬಿ ಉದ್ರಿಕ್ತರಾಗದೆ ಜನತೆ ಸಂಯಮ ಮತ್ತು ಎಚ್ಚರದಿಂದ ಇರಬೇಕೆಂದು ರಾಜ್ಯದ ಜನರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದರು.

- Advertisement -

ಶನಿವಾರ ಮಂಗಳೂರು ಹೊರ ವಲಯದ ಗರೋಡಿಯಲ್ಲಿ ಆಟೋದಲ್ಲಿ ಸ್ಫೋಟ ನಡೆದಿದ್ದು, ಇದೊಂದು ಉಗ್ರರ ಕೃತ್ಯವೆಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು, ಇದರ ಬೆನ್ನಲ್ಲೇ ಸ್ಥಳೀಯ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹುಬ್ಬಳ್ಳಿ ಮೂಲದ ಪ್ರೇಮ್’ರಾಜ್ ಹುಟಗಿ ಎಂಬ ರೈಲ್ವೆ ಸಿಬ್ಬಂದಿಯ ಆಧಾರ್ ಕಾರ್ಡ್ ಸ್ಫೋಟಗೊಂಡ ಆಟೋದಲ್ಲಿ ಪತ್ತೆಯಾಗಿದೆ. ಈ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿವೆ.



Join Whatsapp