ಬೆಂಗಳೂರು: ನಗರದ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂಎಸ್ ರಾಮಯ್ಯ ಬಳಿಯ ಇಸ್ರೋ ಸರ್ಕಲ್ನಲ್ಲಿ ಹಿಟ್ ಆ್ಯಂಡ್ ರನ್ಗೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ.
ಕುವೆಂಪು ನಗರದ ನಿವಾಸಿಗಳಾದ ರಘು ಮತ್ತು ಚಿರಂಜೀವಿ (ಅಪ್ಪ ಮತ್ತು ಮಗ) ಮೃತಪಟ್ಟವರು. ವಾಸು (ಅಳಿಯ) ಸ್ಥಿತಿ ಗಂಭೀರವಾಗಿದೆ.
ಒಂದೇ ಕುಟುಂಬದ ಮೂವರು ಪುಸ್ತಕದ ವ್ಯಾಪಾರ ಮಾಡುತ್ತಿದ್ದರು. ಇವರು ಕಳೆದ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಎಂಎಸ್ ರಾಮಯ್ಯ ಅಸ್ಪತ್ರೆ ಕಡೆಯಿಂದ ಬಂದ ಮಾರುತಿ ಇಕೋ ಕಾರು ಮೊದಲು ನಿಂತಿದ್ದ ಒಂದು ಕಾರು ಮತ್ತು ಆಟೋಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿ ನಿಂತಿದ್ದ ವಾಸುಗೆ ಗುದ್ದಿ, ನಂತರ ಡಿಯೋ ಸ್ಕೂಟರ್ನಲ್ಲಿದ್ದ ರಘು ಮತ್ತು ಚಿರಂಜೀವಿ ಅವರಿಗೆ ಡಿಕ್ಕಿ ಹೊಡೆದಿದೆ.
ಘಟನೆ ಬಳಿಕ ಸ್ಥಳೀಯರು ಕಾರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮೂವರ ಪೈಕಿ ಆಕಾಶ್ ಎಂಬುವರು ಕಾರಿನಿಂದ ಕೆಳಗೆ ಇಳಿದಿದ್ದು, ಉಳಿದ ಇಬ್ಬರು ಕಾರಿನ ಸಹಿತ ಎಸ್ಕೇಪ್ ಆಗಿದ್ದಾರೆ. ಆಕಾಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕಾಶ್ ಮಾಗಡಿ ಜಿಲ್ಲಾ ಪಂಚಾಯತಿ ಸದಸ್ಯರ ಮಗ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.