ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆರೆಸ್ಸೆಸ್ ಮುಖಂಡ ಸಾವರ್ಕರ್ ಎಂಬಾತನಿಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ನಲ್ಲಿ ಪೋಸ್ಟ್ ಮಾಡಿರುವ ನಡೆಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ನೆಟ್ಟಿಗರು ದೇಶದ ಇತಿಹಾಸದ ಕುರಿತು ಅಧ್ಯಯನ ನಡೆಸುವಂತೆ ಮುಖ್ಯಮಂತ್ರಿಗೆ ಸೂಚಿಸಿ ಅವರ ಕಾಲೆಳೆದಿದ್ದಾರೆ.
ಸಾವರ್ಕರ್ ಪುಣ್ಯಸ್ಮರಣೆ ದಿನದ ಪ್ರಯುಕ್ತ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಾವರ್ಕರ್ ಅವರನ್ನು ‘ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ, ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ ಸಾವರ್ಕರ್ ಗೆ ಶತಶತ ನಮನಗಳು. ಅವರ ದೇಶಪ್ರೇಮ, ತ್ಯಾಗ, ಹೋರಾಟ ಎಂದಿಗೂ ಸ್ಫೂರ್ತಿಯಾಗಿದೆ’ ಎಂದು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ಆರೆಸ್ಸೆಸ್ ಪ್ರಮುಖರಾಗಿರುವ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದು, ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿ ಪ್ರಚಾರಪಡಿಸುವುದನ್ನು ಈ ಹಿಂದಿನಿಂದಲೂ ಜನರು ಟೀಕಿಸುತ್ತಾ ಬಂದಿದ್ದರು. ಈ ಮಧ್ಯೆ ಸಾವರ್ಕರ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ.
ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ಗಾಂಧೀಜಿ ಸಲಹೆ ನೀಡಿದ್ದರು ಹೇಳಿಕೆ ನೀಡಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಹಾಸ್ಯಾಸ್ಪದ ಮತ್ತು ವಿವೇಚನಾ ರಹಿತ ಎಂದು ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ ತಿಳಿಸಿದ್ದರು.
ಮುಖ್ಯಮಂತ್ರಿ ಟ್ವೀಟ್ ಗೆ ರಾಜ್ಯದ ಕೆಲವರ ಪ್ರತಿಕ್ರಿಯೆಯ ಝಳಕ್ ಇಂತಿವೆ
ಬೊಮ್ಮಾಯಿಯವರೆˌ ಬ್ರಿಟೀಷರಿಗೆ ಕ್ಷಮಾಪಣೆ ಕೇಳಿ ಪಿಂಚಣೆ ಪಡೆದ ವ್ಯಕ್ತಿಗೆ ಶುಭಾಶಯ ಹೇಳುವ ಮೊದಲು ಒಂದು ಕ್ಷಣ ನಿಮ್ಮ ತಂದೆಯವರು ನಂಬಿದ ಸಿದ್ಧಾಂತವನ್ನು ನೆನಪಿಸಿಕೊಳ್ಳಿ. ಅಧಿಕಾರದಾಸೆಗೆ ನೀವೆಲ್ಲ ಸಂಘಿಗಳ ಮನೆ ಕಾಯುವ ಬದಲಿಗೆ ಸಂಘಿಗಳು ನಿಮ್ಮ ಮನೆ ಕಾಯುವಂತೆ ಬದುಕುವುದು ಯಾವಾಗ?
– ಜೆ.ಎಸ್.ಪಾಟೀಲ್
**
“ಧರ್ಮಸ್ಥಳದಲ್ಲಿ ಇದೇ ಸಾವರ್ಕರ್ ಅನುಯಾಯಿ ದಲಿತ ಯುವಕನನ್ನು ಕೊಲೆ ಮಾಡಿದ್ದಾನೆ. ಆ ಕಡೆ ನಿಮ್ಮವರಾರೂ ಸುಳಿದಿಲ್ಲ”
– ಹೇಮಾ ವೆಂಕಟ್
**
ಇವರು ಗಾಂಧಿ ಹತ್ಯೆಯ ಆರೋಪಿ ಅಲ್ವಾ? ಬ್ರಿಟಿಷರಿಗೆ ನಿರಂತರ ಕ್ಷಮಾಪಣ ಪತ್ರ ನೀಡಿ ಸದಾ ಕಾಲ ನಿಮಗೆ ವಿದೇಯನಾಗಿರುವೆ ಎಂದು ಬರೆದುಕೊಟ್ಟು ಜೈಲಿನಿಂದ ಹೊರಬಂದು ಬ್ರಿಟಿಷರ ಪಿಂಚಣಿ (ಆ ಕಾಲದ 50 ರುಪಾಯಿ) ಪಡೆದು ಬದುಕಿದ ಈತ ವೀರ ಆಗುವುದು ಹೇಗೆ? ಭಾರತದ ಸ್ವಾತಂತ್ರ್ಯಕ್ಕೆ ಆತನ ಕೊಡುಗೆ ಏನು?!
– ಶ್ರೀನಿವಾಸ ಕಾರ್ಕಳ
**
ಬ್ರಿಟಿಷರೆದುರು ಹೋರಾಡಿ ಮಡಿದ ಟಿಪ್ಪುವನ್ನು ದ್ವೇಷಿಸುವ, ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಸಂಗೊಳ್ಳಿ ರಾಯಣ್ಣ, ಆಜೀವ ಬಂಧಿಯಾದ ರಾಣಿ ಚೆನ್ನಮ್ಮರ ಪರಂಪರೆಯನ್ನು ನಾಶ ಮಾಡುವ, ಮಹಾತ್ಮ ಗಾಂಧಿಯವರನ್ನೇ ನಿಂದಿಸುವ, ಅವರ ಹತ್ಯೆಯನ್ನು ಸಮರ್ಥಿಸುವ, ನೆಹರೂ ಅವರಂಥವರನ್ನು ದಿನನಿತ್ಯ ನಿಂದಿಸುವ, ದೊರೆಸ್ವಾಮಿಯವರಂಥ ಸ್ವಾತಂತ್ರ್ಯಯೋಧರನ್ನು ಹಂಗಿಸುತ್ತಲೇ ಇದ್ದ, ಸ್ವಾತಂತ್ರ್ಯ ಚಳವಳಿಯಲ್ಲಾಗಲೀ, ದೇಶ ನಿರ್ಮಾಣದಲ್ಲಾಗಲೀ ಯಾವುದೇ ಕೊಡುಗೆ ನೀಡಿರದ ಪಕ್ಷದವರಿಂದ ಬೇರೇನು ನಿರೀಕ್ಷಿಸಬಹುದು?
– ಡಾ.ಶ್ರೀನಿವಾಸ ಕಕ್ಕಿಲಾಯ
**
ಐ ಆಮ್ ವೆರಿ ಸೋರಿ ಮಿಸ್ಟರ್ ಬೊಮ್ಮಾಯಿ ಸಾರ್. ಸೋರಿ ಡೇ ಅನ್ನು ಮರೆತಿದಕ್ಕೆ ಸೋರಿ ಸೋರಿ ಸೋರಿ. ಹ್ಯಾಪಿ ಸೋರಿ ಡೇ ಸಾರ್.
– ರಹೀಮ್ ಭಾಷಾ
**
ಬ್ರಿಟಿಷರಿಗೆ ಕ್ಷಮಾಪಣೆ ಪತ್ ರಬರೆದವರು ಸ್ವಾತಂತ್ರ್ಯ ಹೋರಾಟಗಾರ ಇವರು ಯಾವಾಗ ಹೋರಾಟ ಮಾಡಿದ್ದಾರೆ ಮಾನ್ಯ ಮುಖ್ಯಮಂತ್ರಿ ಗಳೇ? ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಒಮ್ಮೆ ಓದಿನೋಡಿ, ಎಲ್ಲಿಯಾದ್ರು ದಾಮೋದರ ಸಾವರ್ಕರ್ ಹೆಸರಿದೆಯಾ ನೋಡಿ…
– ಅಬ್ದುಲ್ ಹಮೀದ್
**
ಮುಖ್ಯಮಂತ್ರಿಗಳೇ, ನೀವು ಒಂದು ಜವಾಬ್ದಾರಿ ಸ್ಥಾನದಲ್ಲಿದ್ದುಕ್ಕೊಂಡು ರಾಷ್ಟ್ರಪಿತನ ಸಾವಿಗೆ ಕಾರಣವಾದ ವ್ಯಕ್ತಿಗೆ ಪುಣ್ಯ ಸ್ಮರಣೆ ಶುಭಾಶಯ ಹೇಳ್ತಾ ಇದೀರಲ್ಲ, ಬ್ರಿಟೀಷರ ಕ್ಷಮೆ ಕೇಳಿದ ಹೇಡಿ, ಬ್ರಿಟೀಷರ ಪಿಂಚಣಿ ತೆಗೆದುಕೊಂಡು ಬದುಕುತ್ತಿದ್ದ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ ಅಂದ್ರೆ ಎಲ್ಲಿಂದ ನಗಬೇಕ್ರೀ? ನಮ್ ಕರ್ಮ ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಿರುವುದು.
-ಕುಶಾಲ್ ಬಿದರೆ
**
“ನೀವು ವೈಯಕ್ತಿಕವಾಗಿ ಸಮರ್ಥಿಸಿಕೊಳ್ಳಿ ಸರ್. ಆದರೆ ರಾಜ್ಯ ಮುಖ್ಯಮಂತ್ರಿಯಾಗಿ ಇವರನ್ನು ಸಮರ್ಥಿಸಿಕೊಳ್ಳಬೇಡಿ. ಹೆಮ್ಮೆಯ ಭಾರತ ಮಾತೆಯ ಪುತ್ರರು- ನಮ್ಮ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನವ್ವ. ಇವರು ಎಂದು ಬ್ರಿಟಿಶರ ಬಳಿ ಕ್ಷಮೆ ಕೇಳದೆ ವೀರ ವೇಶದಿಂದ ಹೋರಾಡಿ ದೇಶಕ್ಕೆ ಪ್ರಾಣ ಬಿಟ್ಟರು. ನಿಮ್ಮ ಸಾವರ್ಕರ್ ಥರ ಬ್ರಿಟಿಷರ ಬಳಿ ಕ್ಷಮೆ ಕೇಳಿ ಪಿಂಚಣಿ ಪಡೆಯಲಿಲ್ಲ.
– ಮಧುಸೂದನ್ ಗೌಡ
**
ದಯವಿಟ್ಟು ಇಂಥವನ್ನು ಯೋಧರಿಗೆ ಹೋಲಿಸಬೇಡಿ ಸರ್. ನಮ್ಮ ಯೋಧರಿಗೆ ಮಾಡುವ ಅವಮಾನ ಅದಾಗುತ್ತೆ. ನಮ್ಮ ಯೋಧರು ವೀರರು. ಎಂದೂ ತಲೆ ಬಾಗಲಾರರು.
– ವಿಕಾಸ್ ಗೌಡ
**
ಹೀಗೆ ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ಈ ಸುದ್ದಿ ಬರೆಯುವ ವೇಳೆಗೆ ಸಿಎಂಗೆ ಪೋಸ್ಟ್‌ಗೆ ಒಂದೂವರೆ ಸಾವಿರದಷ್ಟು ಜನರು ‘ಹಹಹ’ ರಿಯಾಕ್ಷನ್ ಒತ್ತಿದ್ದಾರೆ. ನಗುವ ಇಮೋಜಿಯೇ ಹೆಚ್ಚಿನ ಸಂಖ್ಯೆಯಲ್ಲಿದೆ.