ಯುದ್ಧಪೀಡಿತ ಗಾಝಾದಲ್ಲಿ ನಿರಾಶ್ರಿತರ,ಸಂತ್ರಸ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಮ್ಮ 136 ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ವಿಶ್ವಸಂಸ್ತೆಯ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. ಅಲ್ಲದೆ, ಯುಎನ್ ಇತಿಹಾಸದಲ್ಲಿ ನಾವು ಎಂದಿಗೂ ಈ ರೀತಿ ಘಟನೆ ನೋಡಿರಲಿಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಗಾಝಾದ ಜಬಾಲಿಯಾ ಮತ್ತು ಬುರೇಜ್ ಸೇರಿ ಹಲವೆಡೆ ಇರುವ ವಿಶ್ವಸಂಸ್ಥೆಯ ನಿರಾಶ್ರಿತರ ಶಿಬಿರಗಳಲ್ಲಿ ಲಕ್ಷಾಂತರ ಗಾಝಾ ಪಟ್ಟಿಯ ಜನ ಆಶ್ರಯವನ್ನು ಪಡೆದುಕೊಂಡಿದ್ದಾರೆ. ಅವರಿಗೆ ಆಹಾರ, ಔಷಧಿ ಸೇರಿ ಅಗತ್ಯ ನೆರವುಗಳನ್ನು ವಿಶ್ವಸಂಸ್ಥೆ ನೀಡುತ್ತಿದೆ. ಇಸ್ರೇಲ್ ಯದ್ಧದ ವೇಳೆ ಕಳೆದ 75 ದಿನಗಳಲ್ಲಿ ನಿರಾಶ್ರಿತರ, ರೋಗಿಗಳ ಸೇವೆಯಲ್ಲಿದ್ದ 136 ವಿಶ್ವಸಂಸ್ಥೆಯ ಸಿಬ್ಬಂದಿಗಳ ಹತ್ಯೆ ನಡೆಸಲಾಗಿದೆ. ಇತಿಹಾಸದಲ್ಲಿ ನಾವು ಎಂದಿಗೂ ಈ ರೀತಿ ಘಟನೆ ನೋಡಿರಲಿಲ್ಲ ಎಂದು ಗಟೆರೆಸ್ ಆಘಾತ ವ್ಯಕ್ತಪಡಿಸಿದ್ದಾರೆ.
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಈ ಕುರಿತು Xನಲ್ಲಿ ಪೋಸ್ಟ್ ಮಾಡಿದ್ದು, ನಾನು ಹತ್ಯೆಯಾದ ಸಿಬ್ಬಂದಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇಸ್ರೇಲ್ ಆಕ್ರಮಣವನ್ನು ನಡೆಸುತ್ತಿರುವ ರೀತಿಯು ಗಾಝಾದೊಳಗೆ ಮಾನವೀಯ ನೆರವು ವಿತರಣೆಗೆ ಭಾರಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಗಾಝಾದಲ್ಲಿ ಪರಿಣಾಮಕಾರಿ ನೆರವು ಕಾರ್ಯಾಚರಣೆಗೆ ಭದ್ರತೆಯ ಅಗತ್ಯವಿದೆ ಎಂದು ಗುಟೆರೆಸ್ ಹೇಳಿದ್ದಾರೆ. ಯುಎನ್ ಭದ್ರತಾ ಮಂಡಳಿಯು ಗಾಝಾದಲ್ಲಿ ಸುಮಾರು 2 ಮಿಲಿಯನ್ ಜನರಿಗೆ ಹೆಚ್ಚಿನ ಸಹಾಯವನ್ನು ಕೋರುವ ನಿರ್ಣಯವನ್ನು ಅಂಗೀಕರಿಸಿದ ಗಂಟೆಗಳ ನಂತರ ಯುಎನ್ ಕಾರ್ಯದರ್ಶಿ ಈ ರೀತಿ ಪೋಸ್ಟ್ ಮಾಡಿದ್ದಾರೆ.
ಗಾಝಾ ಮೇಲೆ ಯುದ್ಧ ಘೋಷಿಸಿ ಇಸ್ರೇಲ್ ನಡೆಸಿದ ದಾಳಿಯಿಂದ 20,258ಕ್ಕೂ ಅಧಿಕ ಪ್ಯಾಲೆಸ್ತೀನ್ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದಲ್ಲದೆ ಗಾಝಾದಲ್ಲಿ ಯುದ್ಧಪೀಡಿತ ಜನರಿಗೆ ನೆರವನ್ನು ನೀಡುತ್ತಿದ್ದ 136 ವಿಶ್ವಸಂಸ್ಥೆಯ ಸಿಬ್ಬಂದಿಯ ಹತ್ಯೆಯೂ ನಡೆದಿದೆ.