ಹೈದರಾಬಾದ್: ಮಹರ್ ಎಂಬ ದಲಿತ ಜಾತಿಗೆ ಸೇರಿದ 24ರ ಹರೆಯದ ಪ್ರಜ್ವಲ್ ಚಂದ್ರಕಾಂತ ಗಾಯಕ್ವಾಡ್ ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಂಬೇಡ್ಕರ್ ವಿದ್ಯಾರ್ಥಿ ಸಂಘಕ್ಕೆ ಸೇರಿದ ಪ್ರಜ್ವಲ್ ಅವರು ಅಂಬೇಡ್ಕರ್ ವಿದ್ಯಾರ್ಥಿ ಸಂಘಗಳ ಪ್ರತಿನಿಧಿಯಾಗಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಅವರು 608 ಮತಗಳ ಅಂತರದಿಂದ ಗೆದ್ದಿದ್ದಾರೆ. ಇತರ ಐವರು ದಲಿತರು ಸಾಮಾಜಿಕ ನ್ಯಾಯಕ್ಕೆ ತಳಹದಿ ಎನ್ನುವಂತೆ ಬೇರೆ ಬೇರೆ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಸಮಾನತೆಗಾಗಿ ಚಳವಳಿಯು ಯಶಸ್ಸು ಕಂಡಿದೆ ಎಂದು ಅವರು ಹೇಳಿದರು.
“ಜಾತಿ ವಿನಾಶ ಚಳವಳಿಯ ಚಾರಿತ್ರಿಕ ಕ್ಷಣವಿದು. ಭಾರತದ ಬೇರೆ ಯಾವುದೇ ವಿಶ್ವ ವಿದ್ಯಾನಿಲಯದ ಚರಿತ್ರೆಯಲ್ಲಿ ಹತ್ತರಲ್ಲಿ ಆರು ಸ್ಥಾನಕ್ಕೆ ದಲಿತ ವಿದ್ಯಾರ್ಥಿಗಳು ಬೇರೆ ಬೇರೆ ಹುದ್ದೆಗೆ ಸ್ಪರ್ಧಿಸಿ ಗೆದ್ದ ಉದಾಹರಣೆ ಇಲ್ಲ.” ಎಂದು ಪ್ರಜ್ವಲ್ ಹೇಳಿದ್ದಾರೆ.
ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಕ್ರೀಡಾ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ, ಪಿಜಿ ಮತ್ತು ಸಂಶೋಧನಾ ವಿದ್ಯಾರ್ಥಿ ಎಂದು ಸಮಗ್ರ ವಿದ್ಯಾರ್ಥಿಗಳಿಗಾಗಿ ಲೈಂಗಿಕ ಕಿರುಕುಳದ ವಿರುದ್ಧ ಲಿಂಗ ಸಂವೇದನಾ ಸಮಿತಿ ಎಂದು ಒಂಬತ್ತು ಹುದ್ದೆಗಳಿಗೆ ಚುನಾವಣೆ ನಡೆಯಿತು.
ಮಹಾರಾಷ್ಟ್ರದ ನಾಸಿಕ ಮೂಲದ ಪ್ರಜ್ವಲ್ ಅವರು ಲಿಂಗ ಅಧ್ಯಯನದಲ್ಲಿ ಪಿಎಚ್.ಡಿ. ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾದ ಅಂಬೇಡ್ಕರ್ ವಾದಿ ಚಂದ್ರಕಾಂತ ಗಾಯಕ್ವಾಡ್ ಮತ್ತು ಸುಜಾತ ಗಾಯಕ್ವಾಡ್ ದಂಪತಿಯ ಪುತ್ರ ಪ್ರಜ್ವಲ್ ಕೂಡ ಅಂಬೇಡ್ಕರ್ ವಾದಿ. ಪೂನಾದ ಫರ್ಗ್ಯುಸನ್ ಕಾಲೇಜಿನಲ್ಲಿ ವಿದ್ಯಾರ್ಥಿ ರಾಜಕೀಯ ಆರಂಭಿಸಿದ ಪ್ರಜ್ವಲ್ ಅಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸ್ಥಾಪಕ ಸದಸ್ಯರು.
ಇತಿಹಾಸದಲ್ಲಿ ಮಾಸ್ಟರ್ ಪದವಿ ಪಡೆದು ಎಎಸ್ ಎ ಸಹಾಯಕರಾಗಿ 2019ರಲ್ಲಿ ಪ್ರಜ್ವಲ್ ಹೈದರಾಬಾದ್ ವಿಶ್ವವಿದ್ಯಾನಿಲಯ ಸೇರಿದರು. ದಲಿತ ವಿದ್ಯಾರ್ಥಿಗಳ ಬಗೆಗಿನ ತಾರತಮ್ಯದ ಚಳವಳಿಯು ಅವರನ್ನೆಲ್ಲ ಅಂಬೇಡ್ಕರ್ ತತ್ವದಡಿ ಒಟ್ಟಾಗುವಂತೆ ಮಾಡಿತು. ಅತಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಾಮಾಜಿಕ ನ್ಯಾಯದ ಹೋರಾಟವನ್ನು ಹಮ್ಮಿಕೊಳ್ಳಲಾಯಿತು.
ನನ್ನನ್ನು ಅಧ್ಯಕ್ಷನಾಗಿ ಮತ್ತು ನನ್ನ ಜೊತೆಗಾರರನ್ನು ಆರಿಸುವ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯಕ್ಕೆ ಹೆಗ್ಗುರುತಾಗಿದ್ದಾರೆ. “ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಹೈದರಾಬಾದ್ ವಿಶ್ವ ವಿದ್ಯಾನಿಲಯವು ಬೇರೆ ಯಾವುದೇ ವಿಶ್ವವಿದ್ಯಾನಿಲಯಕ್ಕಿಂತ ಮುಂದಿದೆ” ಎಂದು ಪ್ರಜ್ವಲ್ ಹೇಳಿದ್ದಾರೆ.
ಅಕಾಡೆಮಿಯ ಕರ್ತವ್ಯಗಳನ್ನು ನಿರ್ವಹಿಸುತ್ತ, ತನ್ನ ಸಂಶೋಧನಾ ಪ್ರಬಂಧ ಮುಗಿಸುತ್ತ ವಿಶ್ವ ವಿದ್ಯಾನಿಲಯದಲ್ಲಿ ಜಾತೀಯತೆಯ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಅವರು ಹೇಳಿದರು.
ಮೊದಲ ಬಾರಿಗೆ ದಲಿತರೊಬ್ಬರನ್ನು ಅಧ್ಯಕ್ಷರಾಗಿ ಆರಿಸಿರುವುದಲ್ಲದೆ 21ರ ದಲಿತ ಸಮುದಾಯದ ಲಿಂಗ ಬದಲಿ ಮಹಿಳೆ ಹೃತಿಕ್ ಲಕ್ಷ್ಮಣ್ ಲಲನ್ ಅವರನ್ನು ಲಿಂಗ ಸಂವೇದನಾ ಸಮಿತಿಗೆ ವಿದ್ಯಾರ್ಥಿಗಳು ಆರಿಸಿದ್ದಾರೆ.
ಈ ಸಮಿತಿಯು ಲಿಂಗ ತಾರತಮ್ಯ ನಾಶ ಮತ್ತು ಲೈಂಗಿಕ ಕಿರುಕುಳದ ವಿರುದ್ಧ ಕೆಲಸ ಮಾಡುತ್ತದೆ. ಹೃತಿಕ್ ಸಮಾಜ ಶಾಸ್ತ್ರದ ಮೊದಲ ವರ್ಷದ ಮಾಸ್ಟರ್ಸ್ ಪದವಿ ವಿದ್ಯಾರ್ಥಿ. ಗುಜರಾತಿನ ಕಚ್ ಪ್ರದೇಶದ ಮೆಗಾವಾಲ್ ದಲಿತ ಸಮುದಾಯದಾಕೆ ಹೃತಿಕ್. “ಇದೊಂದು ಅತ್ಯದ್ಭುತ ಚಾರಿತ್ರಿಕ ಸಾಧನೆ. ನಮ್ಮ ವಿದ್ಯಾರ್ಥಿ ಸಮುದಾಯದಿಂದ ನನಗೆ ದೊರೆತ ಬೆಂಬಲಕ್ಕೆ ನಾನು ಅಭಾರಿಯಾಗಿದ್ದೇನೆ” ಆಕೆ ಹೇಳಿದರು.
“ಫಲಿತಾಂಶ ಹೊರಬಿದ್ದಾಗ 2019ರಲ್ಲಿ ಲಿಂಗ ಬದಲಾವಣೆಯ ವ್ಯಕ್ತಿಗಳ ರಕ್ಷಣೆ ಮತ್ತು ಹಕ್ಕುಗಳ ಕಾಯ್ದೆಯು ನನಗೆ ನೆನಪಾಯಿತು. ಆ ಕಾಯ್ದೆಯ ಒಂದು ವಿಧಿಯಂತೆ ಲಿಂಗ ಬದಲಾವಣೆಗೊಳಗಾದವರಿಗೆ ಕಿರುಕುಳ ನೀಡುವವರನ್ನು 6 ತಿಂಗಳಿನಿಂದ ಎರಡು ವರ್ಷ ಜೈಲಿಗೆ ಕಳುಹಿಸಬಹುದು. ಇದು ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳಕ್ಕೆ ಸಮಾನವಾದುದು. ಈ ಗೆಲುವು ಬಿಜೆಪಿ ಸರಕಾರದ ಪ್ರತಿಗಾಮಿತನದ ವಿರುದ್ಧ ಸಿಕ್ಕ ಜಯ ಎಂಬುದು ನನ್ನ ನಂಬಿಕೆ” ಎಂದೂ ಹೃತಿಕ್ ಹೇಳಿದಳು.