ಮಂಗಳೂರು| ಧ್ವನಿವರ್ಧಕ ಬಳಕೆ ನಿಯಮ ಹಿಂದೂಗಳು ಪಾಲಿಸಬೇಕು: ಶ್ರೀರಾಮ ಸೇನೆ ನಾಯಕ ಆನಂದ್ ಅಡ್ಯಾರ್

Prasthutha|

►► ಯಕ್ಷಗಾನದಲ್ಲೂ ಪ್ರೇಕ್ಷಕರಿಗಷ್ಟೇ ಧ್ವನಿವರ್ಧಕ ಸೀಮಿತವಾಗಿರಲಿ

- Advertisement -

ಮಂಗಳೂರು: ಧ್ವನಿರ್ವಧಕ ಬಳಕೆ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಹಿಂದೂಗಳು ಕೂಡಾ ಪಾಲಿಸಬೇಕೆಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಹೇಳಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಧ್ವನಿವರ್ಧಕ ಬಳಕೆ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಬೇಕೆನ್ನುವುದೇ ನಮ್ಮ ಹೋರಾಟ. ಯಾವುದೇ ಆಝಾನ್, ಧರ್ಮದ ವಿರುದ್ಧ ನಮ್ಮ ಹೋರಾಟವಲ್ಲ. ಅಲ್ಲದೇ, ಇದು ಕೇವಲ ಶ್ರೀರಾಮ ಸೇನೆಯ ಹೋರಾಟವಲ್ಲ, ಇಡೀ ಸಮಾಜದ ಹೋರಾಟ” ಎಂದರು.

- Advertisement -

ಯಕ್ಷಗಾನಕ್ಕೆ ಎದುರಾಗಬಹುದಾದ ತೊಡಕಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಯಕ್ಷಗಾನದಲ್ಲೂ ಧ್ವನಿವರ್ಧಕ ಬಳಕೆ ಅಲ್ಲಿರುವ ಪ್ರೇಕ್ಷಕರಿಗೆ ಅಷ್ಟೇ ಸೀಮಿತವಾಗಿದ್ದರೆ ಸಾಕು ಅನ್ನೋದು ನಮ್ಮ ಭಾವನೆ. ಹಿಂದೂಗಳು ಕೂಡಾ ಈ ನಿಯಮವನ್ನು ಪಾಲಿಸಬೇಕು. ಇದುವರೆಗೆ ಆ ನಿಯಮ ಪಾಲನೆಯಾಗಿರಲಿಲ್ಲ. ಇನ್ಮುಂದೆ ಆಗಬೇಕಿದೆ” ಎಂದರು.

ಮುತಾಲಿಕ್ ವಿಚಾರವಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆಎಸ್ ಮಸೂದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆನಂದ್ ಶೆಟ್ಟಿ ಅಡ್ಯಾರ್, ಮಸೂದ್ ಅವರು ಮುತಾಲಿಕ್ ಅವರ ಕುರಿತಾಗಿ ನೀಡಿರುವ ಹೇಳಿಕೆ ಖಂಡನೀಯ. ರಾಮಸೇನೆಯನ್ನು ರಾವಣಸೇನೆ ಎಂದಿದ್ದಾರೆ. ಹಾಗೆ ಹೇಳಿರುವುದಕ್ಕೆ ನಮಗೆ ಬೇಸರವಿಲ್ಲ. ಯಾಕೆಂದರೆ ನಾವು ರಾವಣನನ್ನು ಪೂಜಿಸುತ್ತೇವೆ. ಪ್ರಮೋದ್ ಮುತಾಲಿಕ್ ಕುರಿತಾಗಿ ನೀಡಿದ ಹೇಳಿಕೆಯನ್ನು ಮಸೂದ್ ಅವರು ಹಿಂಪಡೆದು, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಕಮೀಷನರ್ ಕಚೇರಿಯಲ್ಲಿ ಪ್ರಮೋದ್ ಮುತಾಲಿಕ್ ಅವರಿಗೆ ಆತಿಥ್ಯ ನೀಡಲಾಗಿದೆ ಅನ್ನೋದು ಸುಳ್ಳು. ಅಂತಹ ಯಾವುದೇ ಆತಿಥ್ಯ ನಮಗೆ ಸಿಕ್ಕಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಶ್ರೀರಾಮಸೇನೆಯ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಉಪಾಧ್ಯಕ್ಷ ಹರೀಶ್ ಶೆಟ್ಟಿ ಬೊಕ್ಕಪಟ್ಣ, ನಗರ ಕಾರ್ಯದರ್ಶಿ ವೆಂಕಟೇಶ್ ಪಡಿಯಾರ್ ಉಪಸ್ಥಿತರಿದ್ದರು.



Join Whatsapp