ನವದೆಹಲಿ: ಸಂಘಪರಿವಾರದ ಕಾರ್ಯಕರ್ತನೊಬ್ಬ ಮುಸ್ಲಿಮ್ ಮಹಿಳೆಯರನ್ನು ಗುರಿಯಾಗಿಸಿ ಅವಹೇಳನ ಮಾಡುವ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಸಂಘಪರಿವಾರದ ಕಾರ್ಯಕರ್ತ ಮುಸ್ಲಿಮ್ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಮತ್ತು ಅತ್ಯಾಚಾರದ ಬೆದರಿಕೆ ಸೇರಿದಂತೆ ದ್ವೇಷಪೂರಿತ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದನು.
ನೈಋತ್ಯ ದೆಹಲಿಯ ನಜಾಫ್‌ಗಢದ ವಿಪುಲ್ ಸಿಂಗ್ ಎಂಬಾತ ತನ್ನ Instagram ಖಾತೆಯಲ್ಲಿ ಮುಸ್ಲಿಮ್ ಮಹಿಳೆಯರ ಅತ್ಯಾಚಾರ ಮತ್ತು ಕೊಲೆಗೆ ಕರೆ ನೀಡಿದ್ದಾನೆ.
ಈ ಪೋಸ್ಟ್ ವಿರುದ್ಧ ಕವಯಿತ್ರಿ, ಸಾಮಾಜಿಕ ಕಾರ್ಯಕರ್ತೆ ನಬಿಯಾ ಖಾನ್, ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಈತನ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.
ನಬಿಯಾ ಖಾನ್ ಟ್ವೀಟ್’ಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಈ ವಿಷಯವನ್ನು ಗಂಭೀರವಾಗಿ ಸ್ವೀಕರಿಸಲಾಗಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಟ್ವೀಟ್’ನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ರಾಷ್ಟ್ರೀಯ ಮಹಿಳಾ ಆಯೋಗವು ಈ ಬಗ್ಗೆ ಗಮನ ಹರಿಸಿದ್ದು, ಎನ್.ಸಿ.ಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ಈ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿ ದೆಹಲಿ ಪೊಲೀಸ್ ಕಮಿಷನರ್’ಗೆ ಪತ್ರ ಬರೆದಿದ್ದಾರೆ.
ಮಾತ್ರವಲ್ಲ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವಂತೆ ಮಹಿಳಾ ಸಮಿತಿ, ಪೊಲೀಸ್ ಕಮಿಷನರ್’ಗೆ ಪತ್ರ ಬರೆದಿದ್ದು, 7 ದಿನಗಳೊಳಗೆ ಕ್ರಮ ಜರುಗಿಸುವಂತೆ ತನ್ನ ಪತ್ರದಲ್ಲಿ ಆಗ್ರಹಿಸಿದೆ.