ಥಾಣೆ: ಮೆದುಳು ನಿಷ್ಕ್ರಿಯಗೊಂಡ ಹಿಂದೂ ಮಹಿಳೆಯೊಬ್ಬರ ಹೃದಯವನ್ನು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮುಸ್ಲಿಮ್ ವ್ಯಕ್ತಿಗೆ ಕಸಿ ಮಾಡಿ ಜೀವ ಉಳಿಸಿರುವ ಮಾನವೀಯ ಘಟನೆ ನಡೆದಿದೆ.
ಮಾತ್ರವಲ್ಲ ಆಕೆಯ ಕಿಡ್ನಿ, ಪಿತ್ತಜನಕಾಂಗ, ಮೇದೋಜಿರಕ ಗ್ರಂಥಿ ಮತ್ತು ಶ್ವಾಸಕೋಶಗಳನ್ನು ಬೇರೆ ಬೇರೆ ಆರು ವ್ಯಕ್ತಿಗಳಿಗೆ ದಾನ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೆದುಳಿನ ರಕ್ತಸ್ರಾವಕ್ಕೊಳಗಾಗಿ ಪರೆಲ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ವೈದ್ಯರ ಸಲಹೆ ಮೇರೆಗೆ ಕುಟುಂಬದ ಸದಸ್ಯರು ಆಕೆಯ ಅಂಗಾಂಗಗಳನ್ನು ಕಸಿ ಮಾಡಲು ಅನುಮತಿ ನೀಡಿದ್ದರು.
ಹಸಿರು ಕಾರಿಡಾರ್ ಬಳಸಿ ಶ್ವಾಸಕೋಶವನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಕಿಡ್ನಿಯನ್ನು ಪರೇಲ್ ನ ಕೆಇಎಂ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರಿಗೆ ಕಸಿಯ ಮೂಲಕ ಜೋಡಿಸಲಾಯಿತು. ಉಳಿದ ಅಂಗಗಳನ್ನು ಗ್ಲೋಬಲ್ ಆಸ್ಪತ್ರೆಗೆ ದಾನ ಮಾಡಲಾಯಿತು.