ವಾಷಿಂಗ್ಟನ್: ಈದ್ ನಮಾಝ್ ನಿರ್ವಹಿಸುತ್ತಿದ್ದ ವೇಳೆ ಭಾರತೀಯ ಮೂಲದ ಹಿಂದೂ ಮಹಿಳೆಯೊಬ್ಬರು ಮಸೀದಿಗೆ ನುಗ್ಗಿ ದಾಂಧಲೆವೆಬ್ಬಿಸಿದ ಘಟನೆ ಅಮೆರಿಕಾದ ವರ್ಜೀನಿಯಾದ ಆಡಮ್ಸ್ ಸೆಂಟರ್’ನಲ್ಲಿ ನಡೆದಿದೆ.
ಈ ಸಂಬಂಧದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯೊಬ್ಬಳು ಮಸೀದಿಗೆ ಪ್ರವೇಶಿಸಿ ಮಿಂಬರ್ (ಪ್ರವಚನ ನೀಡುವ ಸ್ಥಳ) ಮೇಲೆ ಹತ್ತಿ ಇಸ್ಲಾಮಿಕ್ ವಿರೋಧಿ ಘೋಷಣೆಗಳನ್ನು ಕೂಗಿದ್ದಾಳೆ. ಈದ್ ನಮಾಝ್’ಗಾಗಿ ಒಟ್ಟು ಸೇರಿದವರು ಒಂದು ಕ್ಷಣ ವಿಚಲಿತರಾದರೂ ಯಾವುದೇ ಪ್ರತಿರೋಧ ತೋರದೆ ಸಂಯಮ ಪಾಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮಸೀದಿಯೊಳಗೆ ಆಗಮಿಸಿ ಮಹಿಳೆಯನ್ನು ಹೊರಗೆ ಹೋಗುವಂತೆ ಸೂಚಿಸಿದರು. ಆದರೆ ಮಹಿಳೆ ಹೊರಹೋಗಲು ಒಪ್ಪದಿದ್ದಾಗ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಬಲವಂತವಾಗಿ ಬಂಧಿಸಿ ಕರೆದೊಯ್ದರು.
ಆಕೆ ಮತ ಕೇಳಲು ಬಂದವರು ಎಂದು ಮೊದಲು ಮಸೀದಿಯಲ್ಲಿದ್ದವರು ಭಾವಿಸಿದ್ದರು. ಆದರೆ ಆಕೆ ನೇರವಾಗಿ ಮಿಂಬರ್’ಗೆ ಹತ್ತಿ ಅನುಚಿತವಾಗಿ ವರ್ತಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ತಿಳಿದುಬಂದಿದೆ.
ಆಕೆಯ ಹೆಸರು ತಿಳಿದುಬಂದಿಲ್ಲ. ಆಕೆಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.