►ಅನ್ಯೋನ್ಯತೆಯಿಂದ ಜೀವಿಸುತ್ತಿದ್ದ ದಂಪತಿಯ ಬಾಳು ಕತ್ತಲಿನಲ್ಲಿ !
►►ಬಂಧನಕ್ಕೆ ಹೆದರಿ ಪತಿ ಪರಾರಿ, ಹೊಟ್ಟೆಗೆ ಹಿಟ್ಟಿಲ್ಲದೆ ತಾಯಿ- ಮಕ್ಕಳು ಕಂಗಾಲು
►►ಸಂಘಪರಿವಾರದಿಂದ ಮತಾಂತರ ಕಾಯ್ದೆಯ ನಿರಂತರ ದುರುಪಯೋಗ ಬಯಲು !
ಉತ್ತರ ಪ್ರದೇಶ ಮತಾಂತರ ವಿರೋಧಿ ಕಾನೂನನ್ನು ಅಲ್ಲಿನ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಂತರ್ ಧರ್ಮೀಯ ಯುವತಿಯೊಬ್ಬಳನ್ನು ಮದುವೆಯಾಗಿದ್ದ ಮುಸ್ಲಿಮ್ ಯುವಕನ ವಿರುದ್ಧ ಷಡ್ಯಂತ್ರಪೂರ್ವಕವಾಗಿ ಮತಾಂತರ ವಿರೋಧಿ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ. ಪತಿ-ಪತ್ನಿ ಅನ್ಯೋನ್ಯವಾಗಿ ಜೀವಿಸುತ್ತಿದ್ದರೂ ಬಿಜೆಪಿ ಮುಖಂಡರೇ ಸುಳ್ಳು ದೂರು ನೀಡಿದ್ದಾರೆ. ಈ ಕುರಿತು ಪತ್ನಿಗೆ ಮಾಹಿತಿಯೇ ನೀಡಿರಲಿಲ್ಲ ಎನ್ನಲಾಗಿದೆ. ಬಿಜೆಪಿಗರ ಸಂಚಿನಿಂದಾಗಿ ಇದೀಗ ಪತ್ನಿ ಮತ್ತು ಮೂವರು ಮಕ್ಕಳು ಬೀದಿ ಪಾಲಾಗಿದ್ದಾರೆ ಎಂದು ಖುದ್ದು ಪತ್ನಿ ಆರೋಪಿಸಿದ್ದಾಳೆ.
ಪತಿ ನೌಶಾದ್ ವಿರುದ್ಧ ಸಪ್ನಾ ರಜಪೂತ್ ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ತನಗೆ ಪತಿ ಮುಸ್ಲಿಮ್ ಎಂಬುದು ಮದುವೆಯಾಗುವಾಗಲೇ ತಿಳಿದಿತ್ತು. ಮದುವೆಯಾಗಿ ಮೂರು ಮಕ್ಕಳಿವೆ. ನಾವು ಒಟ್ಟಾಗಿ ಜೀವಿಸುತ್ತಿದ್ದೆವು, ನಮ್ಮೊಳಗೆ ಯಾವುದೇ ವೈಷಮ್ಯವಿಲ್ಲ. ಆದರೆ ಸ್ಥಳೀಯ ಬಿಜೆಪಿ ನಾಯಕರೇ ನನ್ನನ್ನು ಬೆದರಿಸಿ, ಬಲವಂತವಾಗಿ ಸುಳ್ಳು ದೂರು ದಾಖಲಿಸಿದ್ದಾರೆ. ನಾನು ಠಾಣೆಗೂ ಹೋಗಿಲ್ಲ. ಎಫ್ಐಆರ್ ದಾಖಲಿಸಿಲ್ಲ ಎಂದು ಯುವತಿ ಸ್ವಪ್ನಾ ವಿಡಿಯೋವೊಂದರಲ್ಲಿ ಹೇಳಿದ್ದಾರೆ.
ತಾನು ಯಾವುದೇ ಎಫ್ಐಆರ್ ದಾಖಲಿಸಲಿಲ್ಲ ಅಥವಾ ಪೊಲೀಸ್ ಠಾಣೆಗೂ ಹೋಗಲಿಲ್ಲ. ಬಿಜೆಪಿ ನಾಯಕರೇ ಇಡೀ ಪ್ರಕರಣವನ್ನು ಸೃಷ್ಟಿಸಿದ್ದಾರೆ. ಪೊಲೀಸರ ಭಯದಿಂದ ನನ್ನ ಪತಿ ತಲೆಮರೆಸಿಕೊಂಡಿದ್ದು, ಇದರಿಂದ ನಾನು ಏಕಾಂಗಿಯಾಗಿದ್ದೇನೆ. ಮನೆಯ ನಿರ್ವಹಣೆಗೂ ಹಣ ಇಲ್ಲದಂತಾಗಿದೆ. ಹೊಟ್ಟೆಗೆ ತಿನ್ನಲೂ ಏನೂ ಇಲ್ಲದಂತಾಗಿದೆ. ನಮಗೆ ಮೂವರು ಮಕ್ಕಳಿದ್ದು, ಭವಿಷ್ಯದ ಬಗ್ಗೆ ಚಿಂತಿತಳಾಗಿದ್ದೇನೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.