ಮುಂಬೈ: ಖ್ಯಾತ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರು ಅಕ್ಟೋಬರ್ 29 ರಿಂದ 31ರ ವರೆಗೆ ಮುಂಬೈನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ವಿರುದ್ಧ ಬಲಪಂಥೀಯ ಹಿಂದುತ್ವ ಗುಂಪು ಆಕ್ಷೇಪ ವ್ಯಕ್ತಪಡಿಸಿ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.
ಈ ಹಿಂದೆ ಇಂದೋರ್ ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಹಿಂದೂ ಧರ್ಮದ ಅವಹೇಳನ ಮತ್ತು ಹಿಂದೂ ವಿರೋಧಿ ಜೋಕ್ಸ್ ಗಳನ್ನು ಪ್ರದರ್ಶಿಸಿದ್ದಾರೆ ಎಂಬ ಆರೋಪದಲ್ಲಿ ಫಾರೂಕಿ ಅವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು.
ಈ ತಿಂಗಳ ಅಂತ್ಯಕ್ಕೆ ಮುಂಬೈನಲ್ಲಿ ನಿಗದಿಯಾಗಿದ್ದ ಫಾರೂಕಿ ಅವರ ಪ್ರದರ್ಶನವನ್ನು ರದ್ದುಪಡಿಸುವಂತೆ ಒತ್ತಾಯಿಸಿ ವಿವಿಧ ಬಲಪಂಥೀಯ ಗುಂಪುಗಳಿಂದ ಬೆದರಿಕೆಗಳನ್ನು ಎದುರಿಸಿದ ಕಾರಣ ಅವರ ಕಾರ್ಯಕ್ರಮ ನಡೆಯುವ ಬಗ್ಗೆ ಅನುಮಾನ ಮೂಡಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಗುಂಪು ಫಾರೂಕಿ ಬೆಂಬಲಿಸಿ ಟ್ವಿಟ್ಟರ್ ಅಭಿಯಾನ ನಡೆಸಿ ಹಿಂದುತ್ವವಾದಿಗಳಿಗೆ ಸಡ್ಡುಹೊಡೆಯುತ್ತಿದೆ.