ಅಕ್ಷಯ್ ಕುಮಾರ್ ನಟನೆಯ ‘ಲಕ್ಷ್ಮಿ ಬಾಂಬ್’ ಚಿತ್ರ ನಿಷೇಧಿಸಲು ಹಿಂದೂ ಮಹಾಸಭಾ ಕರ್ನಾಟಕ ಆಗ್ರಹ

Prasthutha|

►► ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ

- Advertisement -

►►ಲವ್ ಜಿಹಾದ್, ಹಿಂದೂ ದೇವತೆಗಳ ಅವಮಾನ ಆರೋಪ

ಮಂಗಳೂರು: ಹಿಂದೂಗಳ ಭಾವನೆಗೆ ಧಕ್ಕೆಯುಂಟುಮಾಡುವ ಮತ್ತು ಲವ್ ಜಿಹಾದನ್ನು ಬೆಂಬಲಿಸುವ ಅಕ್ಷಯ್ ಕುಮಾರ್ ನಟನೆಯ ‘ಲಕ್ಷ್ಮಿ ಬಾಂಬ್’ ಹಿಂದಿ ಸಿನಿಮಾವನ್ನು ನಿಷೇಧಿಸಬೇಕೆಂದು ಹಿಂದೂ ಮಹಾಸಭಾ, ಕರ್ನಾಟಕ ಘಟಕವು ಆಗ್ರಹಿಸಿದೆ.

- Advertisement -

“ಅಕ್ಷಯ್ ಕುಮಾರ್ ಮುಖ್ಯ ಪಾತ್ರದ ‘ಲಕ್ಷ್ಮಿ ಬಾಂಬ್ ಚಿತ್ರವು ನವೆಂಬರ್ 9 ರಂದು ಥಿಯೇಟರ್ ಗಳಲ್ಲಿ ತೆರೆಕಾಣಲಿದೆ. ಉದ್ದೇಶಪೂರ್ವಕವಾಗಿ ಸಿನಿಮಾಗೆ ಲಕ್ಷ್ಮಿ ದೇವತೆಯ ಹೆಸರಿಡಲಾಗಿದೆ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆಗೊಳಿಸುವುದರ ಹಿಂದೆ ಸಂಚಿದೆ” ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಾದೇಶಿಕ ಕಾರ್ಯದರ್ಶಿ ಧರ್ಮೇಂದ್ರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಅತೀ ಹೆಚ್ಚು ಪೂಜಿಸಲ್ಪಡುವ ದೇವತೆ ಲಕ್ಷ್ಮಿಯ ಹೆಸರನ್ನು ಚಿತ್ರಕ್ಕೆ ಇಡುವ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ. “ಮುಖ್ಯಪಾತ್ರದಲ್ಲಿರುವ ನಟಿಯ ಹೆಸರು ‘ಪ್ರಿಯಾ ಯಾದವ್’ ಮತ್ತು ಹೀರೊ ಆಸಿಫ್. ಮುಸ್ಲಿಮ್ ಯುವಕ ಮತ್ತು ಹಿಂದೂ ಹುಡುಗಿ ಮಧ್ಯೆ ಪ್ರೇಮ ವ್ಯವಹಾರವನ್ನು ಚಿತ್ರವು ತೋರಿಸಿದ್ದು, ಉದ್ದೇಶಪೂರ್ವಕವಾಗಿ ‘ಲವ್ ಜಿಹಾದ್’ಅನ್ನು ಬೆಂಬಲಿಸುತ್ತದೆ. ಸಿನೆಮಾ ಬಿಡುಗಡೆಯನ್ನು ನಿಷೇಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಟ್ರೈಲರ್ ಪ್ರಕಾರ ನಟ ಅಕ್ಷಯ್ ಕುಮಾರ್ ತೃತೀಯ ಲಿಂಗಿಯಾಗಿ ವರ್ತಿಸುತ್ತಾರೆ. ನೃತ್ಯ ಮಾಡುವಾಗ ಕೆಂಪು ಸಾರಿ, ಉದ್ದದ ಕೂದಲು, ತಲೆಯಲ್ಲಿ ಕೆಂಪು ಬಿಂದಿ ಮತ್ತು ಕೈಯಲ್ಲಿ ತ್ರಿಶೂಲ ಹಿಡಿದಿರುತ್ತಾರೆ. ಇದು ಹಿಂದೂ ದೇವತೆಯನ್ನು ಅಪಹಾಸ್ಯಕ್ಕೆ ಗುರಿಪಡಿಸುತ್ತದೆ. ಅದೇರೀತಿ, ತೃತೀಯ ಲಿಂಗಿಗಳಿಗೆ ಅವಮಾನವಾಗಿದೆ. ಚಿತ್ರ ನಿರ್ಮಾಪಕಿ ಸಬೀನಾ ಖಾನ್ ಮತ್ತು ಪ್ಲೇರೈಟ್ ಫರ್ಹಾನ್ ಸಮಾಜಿ ಉದ್ದೇಶಪೂರ್ವಕವಾಗಿ ಚಿತ್ರದಲ್ಲಿ ಕೋಮುಪ್ರಚೋದನೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸಂಚಾಲಕ ಜಗನ್ ಕುಮಾರ್ ಮಾತನಾಡಿ, ನಿರ್ಮಾಪಕರು ಧೈರ್ಯವಿದ್ದರೆ ‘ಫಾತಿಮಾ ಬಾಂಬ್’, ‘ತಸೀಮಾ ಬಾಂಬ್’ ಹೆಸರಲ್ಲಿ ಚಿತ್ರ ನಿರ್ಮಾಣ ಮಾಡಿ ಈದ್ ಸಂದರ್ಭದಲ್ಲಿ ಅದನ್ನು ಬಿಡುಗಡೆಗೊಳಿಸಲಿ ಎಂದರು.

ಜಿಲ್ಲಾಧ್ಯಕ್ಷ ಧನರಾಜ್ ಪೂಜಾರಿ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಅಕ್ಷತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ವಸಂತ ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜೀರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Join Whatsapp