ಬಿಜೆಪಿ ಸರಕಾರದ ವೈಫಲ್ಯವೇ ಹತ್ಯೆಗಳಿಗೆ ಕಾರಣ: ಹಿಂದೂ ಮಹಾಸಭಾ

Prasthutha|

ಮಂಗಳೂರು: ಬೆಳ್ಳಾರೆಯಲ್ಲಿ ನಡೆದಿರುವ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಬಿಜೆಪಿಯು ಹಿಂದೂಗಳ ಹಿತರಕ್ಷಣೆಯಲ್ಲಿ ವಿಫಲವಾಗಿರುವುದೇ ಕಾರಣ ಎಂದು ಅಖಿಲ ಭಾರತ ಹಿಂದೂ ಮಹಾ ಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮತ್ತು ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳುತ್ತಿರುವ ಸರಕಾರದ ಹಿಂದೂ ವಿರೋಧಿ ನೀತಿ ಹಾಗೂ ಆಡಳಿತದ ವೈಫಲ್ಯವು ಹಿಂದೂಗಳ ಹತ್ಯೆಗೆ ಕಾರಣವಾಯಿತು. ಬಿಜೆಪಿಯು ಪ್ರಣಾಳಿಕೆಯಲ್ಲಿ ಕೊಲೆಯಾದ ಎಲ್ಲರ ಬಗ್ಗೆ ನ್ಯಾಯ ಒದಗಿಸುವುದಾಗಿ ಹೇಳಿದರು. ಆದರೆ ನ್ಯಾಯ ಹೋಗಲಿ, ಸರಿಯಾದ ಪರಿಹಾರ ಸಹ ದೊರೆತಿಲ್ಲ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಇದ್ದರೂ ಕಾರ್ಯಕರ್ತರ ರಕ್ಷಣೆ ಆಗುತ್ತಿಲ್ಲ ಎಂದು ರಾಜೇಶ್ ಪವಿತ್ರನ್ ಕಿಡಿಕಾರಿದರು.

ಪ್ರವೀಣ್ ಕೊಲೆ, ಹರ್ಷ ಕೊಲೆ ಇವುಗಳಲ್ಲಿ ಬಿಜೆಪಿಯವರ ಚಿವುಟುವ ಮತ್ತು ತೊಟ್ಟಿಲು ತೂಗುವ ಕೆಲಸ ಮಾಡುತ್ತಿದೆ. ಪಿಎಫ್ ಐ, ಎಸ್ ಡಿಪಿಐ ಮೊದಲಾದ ಸಂಘಟನೆಗಳನ್ನು ಬಿಜೆಪಿ ಸಾಕುತ್ತಿರುವುದರಿಂದ ಅವರನ್ನು ನಿಷೇಧಿಸುವ ಕೆಲಸ ಮಾಡುವುದಿಲ್ಲ. ಇದು ಲಜ್ಜೆಗೇಡಿ ಸರಕಾರ ಎಂದು ಅವರು ಹೇಳಿದರು.

- Advertisement -

ಬಿಜೆಪಿಯವರು ಕೇಸರಿ ಶಾಲು ಹಿಂದುತ್ವ ಎಂದರೂ ಯಾವ ರೀತಿಯಲ್ಲೂ ಹಿಂದೂ ಪರ ಇಲ್ಲ. ನಾವು ಸದ್ಯವೇ ರಾಜ್ಯದಲ್ಲಿ ಕೇಸರಿ ಒಕ್ಕೂಟ ರಚಿಸಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದು ಯೋಗಿ ಮಾದರಿ ಸರಕಾರ ತರುತ್ತೇವೆ. ಯೋಗಿಯವರು ಮೂಲದಲ್ಲಿ ಹಿಂದೂ ಮಹಾಸಭಾದವರು ಹೊರತು ಬಿಜೆಪಿಯವರಲ್ಲ. ಇನ್ನು ಕಾಂಗ್ರೆಸ್ ಔಟ್ ಡೇಟೆಡ್ ಪಕ್ಷ, ಹಾಗಾಗಿ ಅದರ ಬಗ್ಗೆ ಮಾತನಾಡಿ ಫಲವಿಲ್ಲ ಎಂದು ಧರ್ಮೇಂದ್ರ ಹೇಳಿದರು.

ಪ್ರವೀಣ್ ಸ್ವಯಂ ರಕ್ಷಣೆಗೆ ಆಯುಧ ಇಟ್ಟುಕೊಂಡಿದ್ದರೆ ಅವರ ಕೊಲೆ ಆಗುತ್ತಿರಲಿಲ್ಲ. ಸರಕಾರವು ಜನರಿಗೆ ಗನ್ ತರಬೇತಿ ನೀಡುವ ಕೆಲಸ ಮಾಡಬೇಕು. ಬೆಂಗಳೂರಿನಲ್ಲಿ ಚಂದ್ರನ ಕೊಲೆ ಭಾಷಾ ವಿಷಯದಲ್ಲಿ ನಡೆದಿದೆ. 27 ಹಿಂದೂಗಳ ಕೊಲೆಗೆ ನ್ಯಾಯ ಸಿಕ್ಕಿಲ್ಲ. ಕೇಸರಿ ಒಕ್ಕೂಟ ಆಡಳಿತಕ್ಕೆ ಬಂದಾಗ ಸಂವಿಧಾನ ಬದ್ಧವಾಗಿ ಆಡಳಿತ ನಡೆಸುತ್ತೇವೆ ಎಂದೂ ಧರ್ಮೇಂದ್ರ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಹಿತ ಬಿಜೆಪಿಯ ಮುಕ್ಕಾಲು ಪಾಲು ಜನ ಆಮದಾದವರು. ಅವರು ಹಿಂದುತ್ವ ವಾದಿಗಳಲ್ಲ. ನಾವು ಯಾವ ಕೊಲೆಯನ್ನೂ ಸಮರ್ಥಿಸುವುದಿಲ್ಲ ಎಂದೂ ಧರ್ಮೇಂದ್ರ ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಹಿಂದೂ ಮಹಾಸಭಾದ ಹರ್ಷ ನಾಯಕ್ ಉಪಸ್ಥಿತರಿದ್ದರು.



Join Whatsapp