ಅಸ್ಸಾಂ: ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಹಿಮಾ ದಾಸ್ ಅವರು ಶುಕ್ರವಾರ ಅಸ್ಸಾಂ ಪೊಲೀಸ್ ಉಪ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮಾಜಿ ಕೇಂದ್ರ ಕ್ರೀಡಾ ಸಚಿವರಾದ ಸೋನೊವಾಲ್ ಅವರು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಿದ ಸಮಾರಂಭದಲ್ಲಿ ಹಿಮಾ ದಾಸ್ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಡಿಎಸ್ಪಿ ಆಗಿ ಸೇರ್ಪಡೆಗೊಂಡ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ 21 ವರ್ಷದ ಹಿಮಾ, ತಾನು ಚಿಕ್ಕವಳಿದ್ದಾಗ ಪೊಲೀಸ್ ಅಧಿಕಾರಿಯಾಗಬೇಕೆಂದು ಕಂಡ ಕನಸು ಈಗ ನೆರವೇರಿದೆ ಎಂದರು.
‘ಇಲ್ಲಿನ ಜನರಿಗೆ ತಿಳಿದಿದೆ ಮತ್ತು ನಾನು ಬೇರೆ ಏನನ್ನೂ ಹೇಳಲು ಹೋಗುವುದಿಲ್ಲ. ನನ್ನ ಆರಂಭಿಕ ಶಾಲಾ ದಿನಗಳಿಂದಲೂ, ನಾನು ಒಂದು ದಿನ ಪೊಲೀಸ್ ಅಧಿಕಾರಿಯಾಗಬೇಕೆಂಬ ಬಯಕೆಯನ್ನು ಹೊಂದಿದ್ದೆ ಮತ್ತು ನನ್ನ ತಾಯಿಯೂ ಅದನ್ನು ಬಯಸಿದ್ದರು‘.
‘ ನನ್ನ ತಾಯಿ ದುರ್ಗಾ ಪೂಜೆಯ ಸಮಯದಲ್ಲಿ ಬಂದೂಕು (ಆಟಿಕೆ) ಖರೀದಿಸುತ್ತಿದ್ದಳು. ನನ್ನ ತಾಯಿ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲು, ಜನರಿಗೆ ಸೇವೆ ಸಲ್ಲಿಸಲು ಮತ್ತು ಒಳ್ಳೆಯ ವ್ಯಕ್ತಿಯಾಗಲು ಹೇಳುತ್ತಿದ್ದರು.‘
-ಹಿಮಾದಾಸ್
ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಮತ್ತು ಕಿರಿಯ ವಿಶ್ವ ಚಾಂಪಿಯನ್ ಆದ ಹಿಮಾ ದಾಸ್ ತಮ್ಮ ಕೆಲಸದ ಜೊತೆಗೆ ಕ್ರೀಡೆಯಲ್ಲಿ ಸಹ ಶ್ರೇಷ್ಠತೆಗಾಗಿ ನಿರಂತರವಾಗಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.
‘ಧಿಂಗ್ ಎಕ್ಸ್ ಪ್ರೆಸ್’ ಎಂದು ಕರೆಯಲ್ಪಡುವ ಹಿಮಾ ಅವರನ್ನು ಫೆಬ್ರವರಿ 11 ರಂದು ಈ ಹುದ್ದೆಗೆ ನೇಮಿಸಲಾಗಿತ್ತು.
ಹಿಮಾದಾಸ್ 2018 ರ ವಿಶ್ವ ಜೂನಿಯರ್ 400 ಮೀ ಚಾಂಪಿಯನ್ ಎನ್‌ಐಎಸ್-ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದು, ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ.
ಅವರು 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 400 ಮೀ. ಓಟದಲ್ಲಿ ಬೆಳ್ಳಿ ಮತ್ತು ಜಕಾರ್ತದಲ್ಲಿ ನಡೆದ ಚತುಷ್ಪಥ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ.