ಮಂಡ್ಯ: ಹಿಜಾಬ್ ಧರಿಸುವ ಕುರಿತು ನ್ಯಾಯಾಲಯದ ಆದೇಶವನ್ನು ಪಾಲಿಸುವುದಾಗಿ ಬುಧವಾರ ಕಾಲೇಜು ಆವರಣದಲ್ಲಿ ನೂರಾರು ಎಬಿವಿಪಿ ಕಾರ್ಯಕರ್ತರನ್ನು ಎದುರಿಸಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ತಿಳಿಸಿದ್ದಾರೆ.
ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಿದ ಮುಸ್ಕಾನ್ ಅವರನ್ನು ತಡೆದ ಎಬಿವಿಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಕೂಗಿ ದಾಂಧಲೆ ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿನಿ ಮುಸ್ಕಾನ್ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿ ಎಬಿವಿಪಿ ಕಾರ್ಯಕರ್ತರಿಗೆ ತಿರುಗೇಟು ನೀಡಿದ್ದರು.
ಮಂಡ್ಯ ಜಿಲ್ಲೆಯ ಪಿ.ಇ.ಎಸ್ ಕಾಲೇಜಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮುಸ್ಕಾನ್ ಬುರ್ಕಾ ಧರಿಸಿದ್ದಕ್ಕಾಗಿ ಕಾಲೇಜು ಆವರಣದಲ್ಲಿ ನೆರೆದಿದ್ದ ಎಬಿವಿಪಿ ಕಾರ್ಯಕರ್ತರು ಆಕೆಗೆ ಅಡ್ಡಿಪಡಿಸಿದ್ದರು. ನೂರಾರು ವಿದ್ಯಾರ್ಥಿಗಳು‘ಜೈ ಶ್ರೀರಾಮ್’ ಎಂದು ಪ್ರಚೋದನಾಕಾರಿ ಘೋಷಣೆ ಕೂಗುತ್ತಾ ದಾಂಧಲೆ ಆರಂಭಿಸಿದಾಗ ಆಕೆ ಅದಕ್ಕೆ ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ತಿರುಗೇಟು ನೀಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದೆಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಈ ಮಧ್ಯೆ ಆಕೆಯ ಧೈರ್ಯವನ್ನು ಶ್ಲಾಘಿಸಿದ ಜಮೀಅತ್ ಉಲೇಮಾ ಎ ಹಿಂದ್ ಐದು ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಈ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಮುಸ್ಕಾನ್, Assignment ಕೊಡಲು ಕಾಲೇಜಿಗೆ ಹೋದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗುಂಪೊಂದು ನನ್ನನ್ನು ಗೇಟ್ ಬಳಿ ತಡೆದು ನಿಲ್ಲಿಸಿ ಹಿಜಾಬ್ ತೆಗೆಯುವಂತೆ ಬಲವಂತಪಡಿಸಿತ್ತು. ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸದಂತೆ ಬೆದರಿಸಿತ್ತು. ಆರೆಸ್ಸೆಸ್ ವಿದ್ಯಾರ್ಥಿ ಘಟಕವಾದ ಎಬಿವಿಪಿ ಈ ಪುಂಡಾಟಿಕೆಯನ್ನು ವಿರೋಧಿಸಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಂದರ್ಭದಲ್ಲಿ ನಾನು ಹೆದರದೆ ನಿರ್ಭೀತಿಯಿಂದ ‘ಅಲ್ಲಾಹು ಅಕ್ಬರ್’ ಘೋಷಣೆಯ ಮೂಲಕ ಪ್ರತಿಕ್ರಿಯಿಸಿದ್ದೇನೆ. ಸಂಘಪರಿವಾರದ ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು. ನಾನು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇನೆ ಮತ್ತು ಅದಕ್ಕಾಗಿ ಬದ್ಧನಾಗಿದ್ದೇನೆ ಎಂದು ಮುಸ್ಕಾನ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜು ಅಧಿಕಾರಿಗಳು ನನಗೆ ಬೆಂಬಲ ಮತ್ತು ರಕ್ಷಣೆ ನೀಡಿದ್ದಾರೆ ಎಂದು ಮುಸ್ಕಾನ್ ತಿಳಿಸಿದ್ದಾರೆ. “ಪ್ರತಿಯೊಂದು ಧರ್ಮಕ್ಕೂ ಅವರ ಸಂಸ್ಕೃತಿಯನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.