ನವದೆಹಲಿ: ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳನ್ನು ಬೆಂಬಲಿಸಿ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕದಲ್ಲಿ ಸರ್ಕಾರದ ಆದೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳನ್ನು ಬೆಂಬಲಿಸಿ ದೆಹಲಿಯ ವಿವಿಧ ಬೀದಿಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಅಲ್ಲಾಹು ಅಕ್ಬರ್, ಇಂಕ್ವಿಲಾಬ್ ಝಿಂದಾಬಾದ್ ಘೋಷಣೆ ಕೂಗುವ ಮೂಲಕ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಪ್ರತಿಭಟನಕಾರರು, ಯಾವುದನ್ನು ಧರಿಸಬೇಕು ಮತ್ತು ಧರಿಸಬಾರದು ಎಂದು ಪ್ರಶ್ನಿಸಲು ನಿವ್ಯಾರು?. ಹಿಜಾಬ್ ಯಾವ ರೀತಿ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಕೇಳುವ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದರು.
ಹೈಕೋರ್ಟ್ ಆದೇಶ ನಮ್ಮ ವಿರುದ್ಧ ಬಂದರೂ ನಾವು ಸಾಂವಿಧಾನಿಕ ಹಕ್ಕುಗಳಿಗಾಗಿ ಕೊನೆಯ ಕ್ಷಣದ ವರೆಗೂ ಹೋರಾಟ ನಡೆಸುತ್ತೇವೆ. ಸಮವಸ್ತ್ರದೊಂದಿಗೆ ಸಮಾನತೆಯ ಬಗ್ಗೆ ಮಾತನಾಡುವ ಸರ್ಕಾರ ಸಿಖ್ಖರು ಧರಿಸುವ ಪೇಟಾವನ್ನು ನಿಷೇಧಿಸಲಿ. ಸಿಖ್ಖರಿಗೆ ಸಂವಿಧಾನದಲ್ಲಿ ಅವಕಾಶ ನೀಡಿರುವಾಗ ಮುಸ್ಲಿಮರ ಹಕ್ಕನ್ನು ಯಾಕೆ ಕಸಿಯಲಾಗುತ್ತಿದೆ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.