ಹಿಜಾಬ್ ಬಗ್ಗೆ ಪ್ರಚೋದನೆಯ ಹೇಳಿಕೆಗಳು ಸ್ವಾಗತಾರ್ಹವಲ್ಲ: ಜಾಗತಿಕ ಟೀಕೆಗೆ ಭಾರತ ಪ್ರತಿಕ್ರಿಯೆ

Prasthutha|

ನವದೆಹಲಿ: ಇತ್ತೀಚೆಗೆ ಕರ್ನಾಟಕದಲ್ಲಿ ತಲೆದೋರಿರುವ ಹಿಜಾಬ್ ವಿಚಾರದಲ್ಲಿ ಭಾರತದ ನಡೆಗೆ ಜಾಗತಿಕವಾಗಿ ಕೇಳಿಬಂದ ವ್ಯಾಪಕ ಟೀಕೆಗೆ ಭಾರತ ಪ್ರತಿಕ್ರಿಯಿಸಿದ್ದು, ದೇಶದ ಆಂತರಿಕ ವಿಷಯದಲ್ಲಿ ಪ್ರಚೋದನಕಾರಿ ಹೇಳಿಕೆಗಳು ಸ್ವಾಗತಾರ್ಹವಲ್ಲ ಎಂದು ತಿಳಿಸಿದೆ.

- Advertisement -

ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿರುವುದನ್ನು ಬೆಂಬಲಿಸಿ ಜಾಗತಿಕ ಮಟ್ಟದಲ್ಲಿ ಹೇಳಿಕೆ ನೀಡುತ್ತಿರುವುದರಿಂದ ಭಾರತ ಕಂಗೆಟ್ಟಿದೆ.ಇದಕ್ಕೆ ಪ್ರತಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂಧಮ್ ಬಾಗ್ಚಿ ಪ್ರತಿಕ್ರಿಯಿಸಿ, ಭಾರತವನ್ನು ಚೆನ್ನಾಗಿ ಅರಿತವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿನ ಹಿಜಾಬ್ ವಿಚಾರ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಸಾಂವಿಧಾನಿಕ ಚೌಕಟ್ಟು ಮತ್ತು ಕಾರ್ಯವಿಧಾನಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಬಾಗ್ಚಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

- Advertisement -

ಕರ್ನಾಟಕದ ಹಿಜಾಬ್ ವಿಚಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕರ್ನಾಟಕದ ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಅಮೆರಿಕ ಹೇಳಿದೆ.

ಹಿಜಾಬ್ ಕುರಿತು ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು.



Join Whatsapp