ನವದೆಹಲಿ: ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿಸುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಹೋಳಿ ರಜೆಯ ನಂತರ ಪಟ್ಟಿ ಮಾಡುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ.
ಮಾರ್ಚ್ 9 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತಿರುವುದರಿಂದ ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಷರಿಯತ್ ಸಮಿತಿಯ ಪರವಾಗಿ ಹಾಜರಾದ ವಕೀಲರು ಕೋರಿದರು.
ಸುಪ್ರೀಂ ಕೋರ್ಟ್ ಇಂದು ಹೋಳಿ ರಜೆಗಾಗಿ ಮುಚ್ಚುತ್ತಿದೆ ಮತ್ತು ಮಾರ್ಚ್ 13 ರಂದು ಮತ್ತೆ ತೆರೆಯಲಿದೆ.
ಮಾರ್ಚ್ 9 ರಿಂದ ಪರೀಕ್ಷೆಗಳು ಆರಂಭವಾಗಲಿವೆ, ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರಿ ಕಾಲೇಜುಗಳು ಹೇಳಿರುವುದರಿಂದ ಅದಕ್ಕಿಂತ ಮೊದಲು ಪಟ್ಟಿ ಮಾಡುವಂತೆ ವಕೀಲರು ಮನವಿ ಮಾಡಿದರು.
ಹಿಜಾಬ್ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಒತ್ತಾಯಿಸಿದಾಗ,
“ಹೋಳಿ ರಜೆಯ ನಂತರ ನಾನು ಅದನ್ನು ಪಟ್ಟಿ ಮಾಡುತ್ತೇನೆ” ಎಂದು ಸಿಜೆಐ ಉತ್ತರಿಸಿದರು.
“ಆದರೆ ಪರೀಕ್ಷೆಗಳು 9ರಿಂದ ಪ್ರಾರಂಭವಾಗುತ್ತಿವೆ” ಎಂದು ವಕೀಲರು ಪೀಠದ ಗಮನಕ್ಕೆ ತಂದರು.
“ನೀವು ಕೊನೆಯ ದಿನ ಬಂದರೆ ನಾನು ಏನು ಮಾಡಲು ಸಾಧ್ಯ?” ಎಂದು ಸಿಜೆಐ, ವಕೀಲರನ್ನು ಕೇಳಿದರು.
ಈ ವಿಷಯವನ್ನು ಈ ಹಿಂದೆ ಕೂಡ ನಾನು ನ್ಯಾಯಾಲಯದ ಗಮನಕ್ಕೆ ತಂದಿದ್ದೆ ಎಂದು ವಕೀಲರು ಉತ್ತರಿಸಿದರು.
“ವಿದ್ಯಾರ್ಥಿಗಳು ಈಗಾಗಲೇ ಹಿಜಾಬ್ ಕಾರಣದಿಂದ ಒಂದು ವರ್ಷವನ್ನು ಕಳೆದುಕೊಂಡಿದ್ದಾರೆ. ಅವರ ಇನ್ನೊಂದು ವರ್ಷ ಕೂಡ ನಷ್ಟ ಹೊಂದಲಿದೆ. ಈ ವಿಷಯವನ್ನು ಈ ಹಿಂದೆ ಎರಡು ಬಾರಿ ಉಲ್ಲೇಖಿಸಲಾಗಿದೆ, ಜನವರಿಯಲ್ಲಿ, ಫೆಬ್ರವರಿಯಲ್ಲಿ ಉಲ್ಲೇಖಿಸಲಾಗಿದೆ ” ಎಂದು ವಕೀಲರು ಹೇಳಿದರು.
“ನಾನು ಒಂದು ಪೀಠ ರಚಿಸಿ, ಈ ವಿಷಯವನ್ನು ಪಟ್ಟಿ ಮಾಡಿಸುತ್ತೇನೆ” ಎಂದು ಸಿಜೆಐ ಪುನರುಚ್ಚರಿಸಿದರು.
“ಹಾಗಾದರೆ ಪರೀಕ್ಷೆ?” ಎಂದು ವಕೀಲರು ಕೇಳಿದರು.
“ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ” ಎಂದು ಸಿಜೆಐ ಹೇಳಿದರು.
ಅವರು ನ್ಯಾಯಪೀಠವನ್ನು ರಚಿಸುತ್ತಾರೆ ಎಂದು ಹೇಳಿದರು.
ಫೆಬ್ರವರಿ 22 ರಂದು ವಕೀಲ ಶಾದಾನ್ ಫರಾಸತ್ ಅವರು ಹಿಜಾಬ್ ಧರಿಸುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ ನಡೆಯುವ ಪಿಯುಸಿ ಪರೀಕ್ಷೆಗಳಿಗೆ ತಮ್ಮ ಶಿರವಸ್ತ್ರ ಧರಿಸಿ ಹಾಜರಾಗಲು ಅವಕಾಶ ನೀಡುವಂತೆ ಮಧ್ಯಂತರ ನಿರ್ದೇಶನ ನೀಡುವಂತೆ ಕೋರಿದ್ದರು. “ನಾನು ಈ ಬಗ್ಗೆ ಗಮನ ಹರಿಸುತ್ತೇನೆ’ ಎಂದಷ್ಟೇ ಸಿಜೆಐ ಆಗ ಭರವಸೆ ನೀಡಿದ್ದರು.