ಹಿಜಾಬ್ ಮೂಲಭೂತ ಹಕ್ಕಿನ ವಿಚಾರ: ಎಸ್ ಡಿಪಿಐ

Prasthutha|

ನವದೆಹಲಿ: ಹಿಜಾಬ್ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ವಿಭಜಿತ ತೀರ್ಪು ನ್ಯಾಯಾಂಗದ ಇತಿಹಾಸದಲ್ಲಿ ಮೈಲುಗಲ್ಲಿನ ತಿರುವು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಅಡ್ವೊಕೇಟ್ ಶರ್ಫುದ್ದೀನ್ ಅಹ್ಮದ್ ಬಣ್ಣಿಸಿದ್ದಾರೆ.

- Advertisement -

ಮೂಲಭೂತ ಹಕ್ಕುಗಳ ಬಗ್ಗೆ ಜನರನ್ನು ಹಾದಿ ತಪ್ಪಿಸಲು ಮತ್ತು ಪ್ರಭಾವಿಸಲು ಅನವಶ್ಯಕ ಪ್ರಚೋದನೆ ಮತ್ತು ಮಾಧ್ಯಮ  ಸುಳ್ಳು ಪ್ರಚಾರಗಳ ಮೂಲಕ ಸಮಾಜವನ್ನು ಇಬ್ಬಾಗಿಸುವ ಫ್ಯಾಶಿಸ್ಟ್ ಶಕ್ತಿಗಳ ಪ್ರಯತ್ನದ ಮೇಲೆ ಕೋರ್ಟ್ ಪ್ರಹಾರ ಮಾಡಿದೆ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಗೌರವಾನ್ವಿತ ನ್ಯಾಯಾಧೀಶರು ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ನಿರ್ಲಕ್ಷಿಸಲ್ಪಟ್ಟ ತನ್ನಿಚ್ಛೆಯ ಉಡುಗೆ ತೊಡುವ ವೈಯಕ್ತಿಕ ಉಡುಗೆ ಆಯ್ಕೆ ಹಕ್ಕಿನ ಬಗೆಗಿನ ವಾದದ ಅಂಶಗಳಿಗೆ ಹೊಸ ನೋಟವನ್ನು ಕೊಟ್ಟಿದ್ದಾರೆ ಎಂದು ಅಡ್ವೊಕೇಟ್ ಶರ್ಫುದ್ದೀನ್ ಅವರು, ಮುಂದೆ ಬರಲಿರುವ ಪೀಠದ ವಿಚಾರಣೆಯಲ್ಲಿ ಈ ಒಂದು ಮೂಲಭೂತ ಹಕ್ಕುಗಳನ್ನು ಬಹಳ ಜಾಗರೂಕತೆ ಮತ್ತು ಮಹಿಳಾ ಸ್ವಾತಂತ್ರ್ಯದ  ನಿಟ್ಟಿನಲ್ಲಿ ಅರ್ಥೈಸುವ ಕಾರ್ಯ ನಡೆಯಬೇಕಿದೆ. ಹಿಜಾಬ್ ಒಂದು ಮೂಲಭೂತ ಹಕ್ಕಿನ ವಿಚಾರವಾಗಿದ್ದು ಮಹಿಳೆಯರಿಗೆ ಅದನ್ನು ತೊಡಲು ಅವಕಾಶ ನೀಡಬೇಕು. ಜನ ಏನನ್ನು ತೊಡಬೇಕು ಎಂದು ನಿರ್ಧರಿಸುವುದು ಜನರ ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಬರುತ್ತದೆ ಎಂದು ಅವರು ಹೇಳಿದರು.

- Advertisement -

ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ  “ಹಿಜಾಬ್ ಅಂತಿಮವಾಗಿ ಆಯ್ಕೆಯ ವಿಷಯವಾಗಿದೆ, ಹೆಚ್ಚೇನೂ ಅಲ್ಲ, ಬೇರೇನೂ ಅಲ್ಲ” ಎಂಬ ಅಭಿಪ್ರಾಯವನ್ನು ಎಸ್ ಡಿಪಿಐ ನಾಯಕರು ಶ್ಲಾಘಿಸಿದರು. ನಾವು ಒಗ್ಗಟ್ಟಾಗಿ, ಸಾಂವಿಧಾನಿಕ ಚೌಕಟ್ಟನ್ನು ನಂಬುತ್ತೇವೆ ಮತ್ತು ಅದನ್ನು ಎತ್ತಿ ಹಿಡಿಯುತ್ತೇವೆ ಎಂದು ನಮ್ಮನ್ನು ಪ್ರೇರೇಪಿಸಿಕೊಳ್ಳಲು  ಇದು ಒಂದು ಸುಸಂದರ್ಭವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹಿಜಾಬ್ ಧರಿಸುವುದು ಯಾವುದರ ಉಲ್ಲಂಘನೆಯೂ ಆಗುವುದಿಲ್ಲ ಅಥವಾ ಪ್ರಗತಿಗೆ ಅಡ್ಡಿಯೂ ಆಗುವುದಿಲ್ಲ. ಆದರೆ ಇದನ್ನು ನಿಷೇಧಿಸುವುದರಿಂದ ಖಂಡಿತವಾಗಿಯೂ ಕೆಲವು ಮಹಿಳೆಯರು ಶಿಕ್ಷಣ ಪಡೆಯುವುದನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.



Join Whatsapp