ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿರಾಕರಿಸಲಾಗಿದೆ ಎಂಬ ಆರೋಪದ ಮಧ್ಯೆ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ದೆಹಲಿ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ಕೆಲವು ಸ್ಥಾಪಿತ ಹಿತಾಸಕ್ತಿಗಳು ರಾಜಕೀಯಗೊಳಿಸುತ್ತಿದ್ದಾರೆ ಮತ್ತು ದೆಹಲಿ ಶಿಕ್ಷಣ ಇಲಾಖೆಯು ಅಂತಹ ಯಾವುದೇ ನಿರ್ಭಂಧ ವಿಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಸೋಡಿಯಾ, ದೆಹಲಿ ಸರ್ಕಾರ ಎಲ್ಲಾ ಸಂಪ್ರದಾಯಗಳಿಗೆ ಮಾನ್ಯತೆ ನೀಡಿದೆ. ದೆಹಲಿಯ ಶಾಲೆಗಳಲ್ಲಿ ಎಲ್ಲಾ ಧರ್ಮ, ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳನ್ನು ಗೌರವದಿಂದ ಕಾಣಲಾಗುತ್ತಿದೆ. ಈ ಮಧ್ಯೆ ಹಿಜಾಬ್ ವಿಚಾರವನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದೆಹಲಿಯ ಮುಸ್ತಫಾಬಾದ್ ನಲ್ಲಿರುವ ಸರ್ಕಾರಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬರು ತನ್ನ ಸ್ಕಾರ್ಫ್ ಅನ್ನು ತೆಗೆದು ಹಾಕಲು ಸೂಚಿಸಲಾಗಿದೆ ಎಂದು ಆರೋಪಿಸಿದ ನಂತರ ಸಿಸೋಡಿಯಾ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂತ್ರಸ್ತ ವಿದ್ಯಾರ್ಥಿನಿ ಈ ಆರೋಪ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಸದ್ಯ ಈ ವಿವಾದದ ಬಗ್ಗೆ ಶಾಲಾ ಅಧಿಕಾರಿಗಳು, ಬಾಲಕಿಯ ಪೋಷಕರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.