ಸಿಇಟಿ ಪರೀಕ್ಷೆಗೂ ಹಿಜಾಬ್ ನಿಷೇಧ

Prasthutha|

ಬೆಂಗಳೂರು: ಎಸ್‌ ಎಸ್‌ ಎಲ್‌ ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆ ಬಳಿಕ ಇದೀಗ ಸಿಇಟಿ ಪರೀಕ್ಷೆಗೂ ರಾಜ್ಯ ಸರ್ಕಾರ ಹಿಜಾಬ್‌ (ಶಿರವಸ್ತ್ರ) ನಿಷೇಧ ಹೇರಿದೆ.

- Advertisement -

ಎಸ್‌ ಎಸ್‌ ಎಲ್‌ ಸಿ ಮತ್ತು ದ್ವೀತಿಯ ಪಿಯುಸಿಗೆ ಅನ್ವಯವಾಗುವ ನಿಯಮಗಳೇ ಸಿಇಟಿ ಪರೀಕ್ಷೆಗೂ ಅನ್ವಯವಾಗಲಿದ್ದು ಇಲ್ಲೂ ಹಿಜಾಬ್ ನಿಷೇಧಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬರುವ ಜೂನ್ 16, 17 ಹಾಗೂ 18 ರಂದು ಈ ವರ್ಷದ ಸಿಇಟಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಿಜಾಬ್ ಸೇರಿದಂತೆ ಧಾರ್ಮಿಕ ಭಾವನೆಗಳ ಉಡುಪುಗಳನ್ನು ಧರಿಸದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

- Advertisement -

ಏನೆಲ್ಲಾ ನಿಷೇಧ?

ಸಿಇಟಿ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ನಿಯಮಗಳನ್ನು ಜಾರಿ ಮಾಡಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದೆ.

ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸುವಂತಿಲ್ಲ. ಹಿಜಾಬ್ ಅಲ್ಲದೇ ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ವಸ್ತ್ರಗಳನ್ನು ವಿದ್ಯಾರ್ಥಿಗಳು ಧರಿಸುವಂತಿಲ್ಲ.

ಪರೀಕ್ಷಾ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಾಚ್ ನಿಷೇಧ (ಕೈ ಗಡಿಯಾರ) ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಆಭರಣಗಳನ್ನು ಧರಿಸುವುದಕ್ಕೂ ನಿಷೇಧ ಹಾಕಲಾಗಿದೆ. ಮೊಬೈಲ್ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಿದ್ದು, ಪ್ರತಿ ಕೇಂದ್ರದಲ್ಲೂ ಕೆಇಎಯಿಂದಲೇ ಗಡಿಯಾರ ಅಳವಡಿಕೆ ಮಾಡಲು ತೀರ್ಮಾನ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಕುಡಿಯುವ ನೀರು ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲು ಕೆಇಎ ತೀರ್ಮಾನ ಕೈಗೊಂಡಿದೆ.



Join Whatsapp