ಹಿಜಾಬ್ ನಿಷೇಧವು ಮೂಲಭೂತ ಹಕ್ಕಾದ ಧಾರ್ಮಿಕ ಸ್ವಾತಂತ್ರ್ಯದ ನೇರ ಉಲ್ಲಂಘನೆ: ವಿಮೆನ್ಸ್ ಫ್ರಂಟ್

Prasthutha|

ಬೆಂಗಳೂರು: ಹಿಜಾಬ್ ಧರಿಸುವುದನ್ನು ನಿಷೇಧಿಸುವುದು ಮೂಲಭೂತ ಹಕ್ಕಾದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರ್ಬಂಧಿಸಿರುವುದು ಖಂಡನೀಯ. ಶಿಕ್ಷಣ ಸಂಸ್ಥೆಗಳು ಶೀಘ್ರವೇ ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡು ಅಮಾನತುಗೊಂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ನೆರವು ನೀಡಿ ತರಗತಿ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ವಿದ್ಯಾಲಯಗಳಲ್ಲಿ ವಿದ್ಯೆಯನ್ನು ಪಡೆಯುವ ಹಕ್ಕನ್ನು ನೀಡಿರುವ ಸಂವಿಧಾನವು ತಮ್ಮ ಧರ್ಮಕ್ಕೆ ಅನುಸಾರವಾಗಿ ಆಚಾರ- ವಿಚಾರಗಳನ್ನು ಪಾಲಿಸುವ ಸ್ವಾತಂತ್ರ್ಯ ವನ್ನೂ ನೀಡಿದೆ. ಧಾರ್ಮಿಕ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದು. ಇದು ವಿವಿಧತೆಯಲ್ಲಿ ಏಕತೆಯ ಧ್ಯೇಯವನ್ನು ಹೊಂದಿರುವ ಭಾರತ ದೇಶದಲ್ಲಿ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಪಾದಿಸುತ್ತಾ, ಎಲ್ಲೆಡೆ ಶಾಂತಿ- ಸಾಮರಸ್ಯವನ್ನು ಸಾರುತ್ತದೆ. ವಿದ್ಯಾಲಯಗಳು ಈ ಸಾಂವಿಧಾನಿಕ ಮೌಲ್ಯವನ್ನು ಅರ್ಥಮಾಡಿಕೊಂಡು ತಮ್ಮ ವಿದ್ಯಾರ್ಥಿಗಳಲ್ಲಿ ಈ ಉದಾತ್ತ ಸಹಿಷ್ಣತಾ ಗುಣವನ್ನು ಬೆಳೆಸಲು ಒತ್ತುಕೊಡಬೇಕು. ಆದರೆ ಇಂದು ಧಾರ್ಮಿಕ ವೇಷಭೂಷಣದ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ತೋರುವ ತಾರತಮ್ಯ ನೀತಿ ಮತ್ತು ಅವರ ಹಕ್ಕುಗಳ ನಿರಾಕರಣೆಯು ಆರ್ಟಿಕಲ್ 14 , 15, 17 ಮತ್ತು 25 ರ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ಶೈಕ್ಷಣಿಕ ಸಂಸ್ಥೆಗಳು ಮತ್ತು ಅದರ ಆಡಳಿತಾತ್ಮಕ ಅಧಿಕಾರಿಗಳು ಧಾರ್ಮಿಕ ಅಸಹಿಷ್ಣುತೆಯ ಮನೋಭಾವ ಹೊಂದಿದ್ದು, ಇದರಿಂದ ಇಂತಹ ಅನೇಕ ಸಮಸ್ಯೆಗಳು ಪ್ರಚೋದಿಸಲ್ಪಡುತ್ತಿದೆ. ಇದರಿಂದ ನ್ಯಾಯಯುತ ಪರಿಹಾರದ ಪ್ರಕ್ರಿಯೆಯು ವಿಳಂಬಗೊಳ್ಳುತ್ತಿದೆ. ಧಾರ್ಮಿಕ ಅಸಹಿಷ್ಣುತೆ ಬೆಳೆಯಲು ಅವಕಾಶ ಸಿಗದಂತೆ ಶಿಕ್ಷಣ ಸಂಸ್ಥೆಯು ಶೀಘ್ರವೇ ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡು ಅಮಾನತುಗೊಂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ನೆರವು ನೀಡಿ ತರಗತಿ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

- Advertisement -

Join Whatsapp