ಭಾಷಣದಲ್ಲಿ ಮತದಾರರಿಗೆ ಆಮಿಷ : ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು

Prasthutha|

ಬೆಂಗಳೂರು: ಚುನಾವಣೆ ಸಮಯದಲ್ಲಿ ಮತದಾರರಿಗೆ ಆಮಿಷವೊಡ್ಡಿದ ಆರೋಪದಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ರದ್ದುಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

- Advertisement -

ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಮೇ 7 ರಂದು ನಡೆದ ರೋಡ್‌ ಶೋ ವೇಳೆ ಜೆಪಿ ನಡ್ಡಾ ಮತದಾರರಿಗೆ ಆಮಿಷ ನೀಡಿದ್ದಾರೆಂದು ದೂರು ದಾಖಲಾಗಿತ್ತು. ನಡ್ಡಾ ಅವರ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಚುನಾವಣಾ ಜಾಗೃತ ವಿಭಾಗದ ಅಧಿಕಾರಿ ವೀರಣ್ಣ ಲಕ್ಕಣ್ಣವರ್‌ ನೀಡಿದ ದೂರಿನ ಆಧಾರದಲ್ಲಿ ಹರಪನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ತಮ್ಮ ವಿರುದ್ಧ ಆಧಾರ ರಹಿತವಾಗಿ ದಾಖಲಾದ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಹೈಕೋರ್ಟಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜೆ.ಪಿ. ನಡ್ಡಾ ಅರ್ಜಿ ಸಲ್ಲಿಸಿದ್ದರು.

- Advertisement -

ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರು ರಾಜ್ಯಸಭಾ ಸದಸ್ಯರಾಗಿರುವ ಕಾರಣ ದೂರು ದಾಖಲಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಿತ್ತು. ಈ ಅನುಮತಿ ಪಡೆಯುವಲ್ಲಿ ನಿಯಮಗಳನ್ನು ಪಾಲಿಸಿಲ್ಲ. ದಾಖಲಾದ ದೂರಿನಲ್ಲಿಯೂ ಮತದಾರರಿಗೆ ಆಮಿಷ ಹಾಗೂ ಬೆದರಿಕೆ ಒಡ್ಡುವಂತಹ ಹೇಳಿಕೆ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟು ಎಫ್‌ಐಆರ್ ಅನ್ನು ರದ್ದುಪಡಿಸಿದೆ.

ಈ ಪ್ರಕರಣದ ವಾದ, ಪ್ರತಿವಾದ ಬೆಂಗಳೂರು ಜನಪ್ರತಿನಿಧಿಗಳ‌ ನ್ಯಾಯಾಲಯದಲ್ಲಿ ನಡೆದಿತ್ತು. ಸೋಮವಾರ ಧಾರವಾಡ ಹೈಕೋರ್ಟ್ ಪೀಠದಿಂದ ತೀರ್ಪು ಪ್ರಕಟವಾಗಿದೆ.

ನಡ್ಡಾ ಹೇಳಿದ್ದೇನು?

ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಸೋತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಮತದಾರರು ವಂಚಿತರಾಗಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಕೇಂದ್ರದ ಹಲವು ಯೋಜನೆಗಳನ್ನು ಸ್ಥಗಿತ ಮಾಡಲಾಗುತ್ತದೆ ಎಂದು ಭಾಷಣ ಮಾಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮೇ 11ರಂದು ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಲಾಗಿತ್ತು.



Join Whatsapp