ಬೆಂಗಳೂರು: ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ. ಆದರೆ ಅವರನ್ನು ಬಂಧಿಸದಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ನಿರ್ದೇಶಿಸಿದೆ.
ಕೈಗಾರಿಕೆ ಇಲಾಖೆಯ ಮಾರ್ಕೆಟಿಂಗ್, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ.
ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ನಿರ್ದೇಶಿಸಿರುವ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಮಾಜಿ ಸಚಿವ ಮುರುಗೇಶ್ ನಿರಾಣಿ ಸಲ್ಲಿಸಿರುವ ಅರ್ಜಿ ಸಲ್ಲಿಸಿದ್ದರು.
ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಬಹುದು. ಆದರೆ, ತನಿಖೆಗೆ ಸಹಕರಿಸಿದರೆ, ಅರ್ಜಿದಾರರನ್ನು ತನಿಖಾಧಿಕಾರಿಗಳು ಬಂಧಿಸುವಂತಿಲ್ಲ ಎಂದು ನಿರ್ದೇಶಿಸಿದೆ.
ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಪ್ರಕರಣದ ಮೂಲ ದೂರುದಾರ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಮತ್ತು ಬೆಂಗಳೂರು ಹೈಗ್ರೌಂಡ್ಸ್ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಪೀಠ ವಿಚಾರಣೆ ಮುಂದೂಡಿದೆ.