ಬೆಂಗಳೂರು: ಪದವಿ ಹಂತದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಕ್ರಮ ಸರಿಯಾದುದಲ್ಲ ಎಂದಿರುವ ಹೈಕೋರ್ಟ್, ರಾಜ್ಯ ಸರ್ಕಾರ ತನ್ನ ಆದೇಶವನ್ನು ಮರುಪರಿಶೀಸಬೇಕು ಎಂದು ಸೂಚಿಸಿದೆ.
ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಯುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಹೇಳಿದೆ.
ಸರ್ಕಾರದ ಉದ್ದೇಶ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದಷ್ಟೇ ಆಗಿದೆ. ರಾಜ್ಯದಲ್ಲಿ ಉದ್ಯೋಗ ಮಾಡುವುದಕ್ಕೂ ಕನ್ನಡ ಕಲಿಕೆ ಬೇಕಾಗುತ್ತದೆ. ಹೀಗಾಗಿ ಕನ್ನಡ ಭಾಷೆಯನ್ನು ಪದವಿ ಹಂತದಲ್ಲಿ ಕಲಿಸಲು ಮುಂದಾಗಿದೆ ಎಂದ ರಾಜ್ಯ ಸರ್ಕಾರದ ಪರ ವಕೀಲ ಸರ್ಕಾರದ ಕ್ರಮವನ್ನು ಸಮರ್ಥಿಸಿದ್ದಾರೆ. ಇದಕ್ಕೆ ಒಪ್ಪದ ನ್ಯಾಯಾಲಯ, ಉದ್ಯೋಗದಲ್ಲಿ ಕನ್ನಡ ಕಲಿಕೆಯನ್ನು ಪರಿಗಣಿಸಬಹುದು. ಅದಕ್ಕೆ ನೀವು ಷರತ್ತು ಹಾಕಬಹುದು, ಶಿಕ್ಷಣದಲ್ಲಿ ಸೂಕ್ತವಲ್ಲ. ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪದವಿಗೂ ಮೊದಲು ಕನ್ನಡ ಕಲಿಯದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ ಸರ್ಕಾರದ ಆದೇಶವನ್ನು ಮರುಪರಿಶೀಲಿಸುವಂತೆ ಸೂಚಿಸಿದೆ.
ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆಗಸ್ಟ್ 7ರಂದು ಆದೇಶ ಹೊರಡಿಸಿತ್ತು.